ಉದಯವಾಹಿನಿ, ಬದಲಾಗುತ್ತಿರುವ ಹವಾಮಾನ ಆರೋಗ್ಯವನ್ನು ಹಾಳು ಮಾಡುವುದು ಸಹಜ. ಆದರೆ ಈ ರೀತಿ ಆದಾಗ ಯಾವಾಗಲೂ ಮಾತ್ರೆ, ಮತ್ತಿತರ ಔಷಧಿಗಳ ಮೊರೆ ಹೋಗಲು ಸಾಧ್ಯವಿಲ್ಲ. ಏಕೆಂದರೆ ಅವೇ ದೇಹಕ್ಕೆ ಹಾನಿ ಮಾಡುತ್ತದೆ ಹಾಗಾಗಿ ಸಣ್ಣ ಪುಟ್ಟ ಜ್ವರ, ಶೀತ, ಕೆಮ್ಮಿನಿಂದ ಮುಕ್ತಿ ಪಡೆಯಲು ಮನೆಯಲ್ಲಿಯೇ ಇರುವ ವಸ್ತುಗಳನ್ನು ಬಳಕೆ ಮಾಡಿಕೊಂಡು ಮದ್ದನ್ನು ಮಾಡಬಹುದು. ಈ ಋತುಮಾನದಲ್ಲಿ ಬಿಸಿ ಬಿಸಿಯಾಗಿರುವ ಆಹಾರ ಸೇವನೆ ಮಾಡಲು ಮನಸ್ಸಾಗುವುದರಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಕೂಡ ಪ್ರತಿನಿತ್ಯ ಬೆಲ್ಲದ ಚಹಾ ಮಾಡಿ ಕುಡಿಯಬಹುದು. ಆರೋಗ್ಯ ತಜ್ಞರು ಕೂಡ ಇದನ್ನು ಕುಡಿಯಲು ಶಿಫಾರಸು ಮಾಡುತ್ತಾರೆ. ಆದರೆ ಬೆಲ್ಲದ ಚಹಾ ಸಂಪೂರ್ಣವಾಗಿ ಸಿದ್ಧವಾಗುವ ಮೊದಲೇ ಒಡೆದು ಹಾಳಾಗುತ್ತದೆ ಎಂಬ ಭಯ ಹಲವರನ್ನು ಕಾಡುತ್ತದೆ. ಹಾಗಾಗಿ ಬೆಲ್ಲದ ಚಹಾ ತಯಾರಿಸುವುದು ಕಷ್ಟವೆನಿಸುತ್ತದೆ ಅಂತವರು ಈ ಸರಳ ವಿಧಾನವನ್ನು ಪ್ರಯತ್ನಿಸುವ ಮೂಲಕ ಬೆಲ್ಲದ ಚಹಾವನ್ನು ಯಾವುದೇ ರೀತಿಯ ತೊಂದರೆ ಇಲ್ಲದೆ ಮಾಡಬಹುದು ಮಾತ್ರವಲ್ಲ ಶೀತ, ಕೆಮ್ಮಿನಿಂದಲೂ ತಕ್ಷಣ ಪರಿಹಾರ ಪಡೆಯಬಹುದು.
ಬೆಲ್ಲದ ಚಹಾ ತಯಾರಿಸಲು ಸುಲಭ ವಿಧಾನ: ಪೌಷ್ಟಿಕಾಂಶ ಭರಿತವಾಗಿರುವ ಬೆಲ್ಲದ ಚಹಾ ತಯಾರಿಸಲು, ನಿಮಗೆ ಒಂದು ಕಪ್ ನೀರು, ಒಂದು ಕಪ್ ಹಾಲು, ಎರಡು ಟೀ ಚಮಚ ಚಹಾ ಪುಡಿ, ಒಂದು ಇಂಚಿನ ತುಂಡು ಶುಂಠಿ, ನಾಲ್ಕು ಟೀ ಚಮಚ ಬೆಲ್ಲ ಮತ್ತು ಎರಡು ಹಸಿ ಏಲಕ್ಕಿ ಬೇಕಾಗುತ್ತವೆ. ಮಾಡುವ ಮೊದಲು, ಒಂದು ಪಾತ್ರೆಗೆ ಹಾಲನ್ನು ಹಾಕಿ ಅದು ಬಿಸಿಯಾಗುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ. ನಂತರ, ಇನ್ನೊಂದು ಪಾತ್ರೆಯಲ್ಲಿ ಒಂದು ಕಪ್ ನೀರು ಸೇರಿಸಿ ಮಧ್ಯಮ ಉರಿಯಲ್ಲಿ ಕುದಿಸಿ. ಶುಂಠಿ, ಹಸಿರು ಏಲಕ್ಕಿ ಮತ್ತು ಬೆಲ್ಲವನ್ನು ಬಿಸಿ ನೀರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ಬೆಲ್ಲ ಕರಗುವ ವರೆಗೆ ಸರಿಯಾಗಿ ಕುದಿಸಿ ಬೆಲ್ಲ ಕರಗಿದ ನಂತರ, ಅದಕ್ಕೆ ಚಹಾ ಪುಡಿಯನ್ನು ಸೇರಿಸಬಹುದು. ಕಡಿಮೆ ಉರಿಯಲ್ಲಿ ಚಹಾವನ್ನು ಕುದಿಸಿಕೊಳ್ಳಿ. ಕೊನೆಯಲ್ಲಿ ಈ ಮಿಶ್ರಣಕ್ಕೆ ಕುದಿಸಿ ಪಕ್ಕಕ್ಕಿಟ್ಟ ಹಾಲನ್ನು ಸೇರಿಸಿ. ಈಗ ಚಹಾವನ್ನು ಮಧ್ಯಮ ಉರಿಯಲ್ಲಿ ಮತ್ತೊಮ್ಮೆ ಕುದಿಯುಲು ಬಿಡಿ ಬಳಿಕ ಗ್ಯಾಸ್ ಆಫ್ ಮಾಡಿ. ಈ ರೀತಿ ಮಾಡಿದರೆ ಬಿಸಿ ಬಿಸಿಯಾಗಿರುವ ಬೆಲ್ಲದ ಚಹಾ ಕುಡಿಯಲು ಸಿದ್ಧವಾಗುತ್ತದೆ.
