ಉದಯವಾಹಿನಿ, ಭೋಪಾಲ್: ಮೇಲ್ಜಾತಿ-ಕೀಳುಜಾತಿ ಎಂಬ ಬೇಧ ಭಾವ ಈಗಲೂ ದೇಶದಲ್ಲಿ ನಡೆಯುತ್ತಿದೆ ಎನ್ನುವುದಕ್ಕೆ ಇಲ್ಲಿದೆ ಉತ್ತಮ ಉದಾಹರಣೆ. ಮಧ್ಯ ಪ್ರದೇಶದಲ್ಲಿ ಇಂತಹದ್ದೊಂದು ಆಘಾತಕಾರಿ ಘಟನೆ ನಡೆದಿದ್ದು, ಬ್ರಾಹ್ಮಣ ವ್ಯಕ್ತಿಯ ಕಾಲು ತೊಳೆದು ನೀರನ್ನು ಸೇವಿಸುವಂತೆ ಒಬಿಸಿಗೆ (ಇತರ ಹಿಂದುಳಿದ ವರ್ಗ) ಸೇರಿದ ವ್ಯಕ್ತಿಗೆ ಶಿಕ್ಷೆ ನೀಡಲಾಗಿದೆ. ಬ್ರಾಹ್ಮಣ ವ್ಯಕ್ತಿಯನ್ನು ಅವಮಾನಿಸಿದ್ದಕ್ಕೆ ಈ ಶಿಕ್ಷೆ ವಿಧಿಸಲಾಗಿದೆ. ಮಧ್ಯ ಪ್ರದೇಶದ ದಮೋಹ್ ಜಿಲ್ಲೆಯಲ್ಲಿ ಈ ಅಮಾನುಷ ಘಟನೆ ನಡೆದಿದೆ. ಸದ್ಯ ಈ ಪ್ರಕರಣ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ ಅದಾಗ್ಯೂ ಎರಡೂ ಕಡೆಯವರು ಘಟನೆಯನ್ನು ಸುಮ್ಮನೆ ರಾಜಕೀಯಗೊಳಿಸಲಾಗುತ್ತಿದೆ ಎಂದು ಕರೆದಿದ್ದಾರೆ.
ವಿವಿಧ ಸಮುದಾಯಗಳ ನಡುವಿನ ಸಾಮರಸ್ಯಕ್ಕೆ ಧಕ್ಕೆ ತರುವ ಕೃತ್ಯ ಸೇರಿದಂತೆ ಹಲವು ವಿಭಾಗಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ʼʼಕುಶ್ವಾಹ ಸಮುದಾಯದವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
