ಉದಯವಾಹಿನಿ, ಪಟನಾ: ತನ್ನ ಗೆಳತಿಯನ್ನು ಮದುವೆಯಾಗಲು ಆಕ್ಷೇಪ ವ್ಯಕ್ತಪಡಿಸಿದ ಕಾರಣ ವ್ಯಕ್ತಿಯೊಬ್ಬ ತನ್ನ ಎರಡನೇ ಪತ್ನಿಗೆ ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆ ಬಿಹಾರದ ನಳಂದ ಜಿಲ್ಲೆಯಲ್ಲಿ ನಡೆದಿದೆ. ವಿಕಾಸ್ ಕುಮಾರ್ ಎಂದು ಗುರುತಿಸಲ್ಪಟ್ಟ ಆರೋಪಿಯು ತನ್ನ ಪತ್ನಿಗೆ ಬೆಂಕಿ ಹಚ್ಚಿದಾತ. ಈತ ಐದು ವರ್ಷಗಳ ಹಿಂದೆ ಸುನೀತಾ ದೇವಿ (25) ಅವರನ್ನು ವಿವಾಹವಾಗಿದ್ದ. ಕೋಪದ ಭರದಲ್ಲಿ ಅವನು ಸುನೀತಾಳಿಗೆ ಪೆಟ್ರೋಲ್ ಸುರಿದು, ಸಿಲಿಂಡರ್‌ನಿಂದ ಎಲ್‌ಪಿಜಿಯನ್ನು ಬಿಡುಗಡೆ ಮಾಡಿ, ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುನೀತಾಳನ್ನು ವಿಕಾಸ್ ಕುಮಾರ್‌ಗೆ ಮದುವೆ ಮಾಡಿದ ನಂತರವೇ ಆತನಿಗೆ ಈ ಮೊದಲು ಮದುವೆಯಾಗಿದ್ದ ವಿಚಾರ ತಮಗೆ ತಿಳಿಯಿತು ಎಂದು ಕೊಲೆಯಾದ ಮಹಿಳೆಯ ತಂದೆ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಆತ ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಮದುವೆಯಾಗಿದ್ದಾನೆ ಎಂಬುದು ಆಮೇಲೆ ತಿಳಿಯಿತು ಎಂದು ಹೇಳಿದ್ದಾರೆ. ವಿಚಾರ ಗೊತ್ತಾದ ಬಳಿಕ ಆರೋಪಿ ವಿಕಾಸ್ ಕುಮಾರ್ ಅವರ ಕುಟುಂಬವು ಸುನೀತಾಳನ್ನು ತಮ್ಮೊಂದಿಗೆ ಇರಲು ಮನವೊಲಿಸಿತ್ತು ಎಂದು ಹೇಳಿದರು.
ಬಳಿಕ ಇಬ್ಬರು ಸಂಸಾರ ಮಾಡಿಕೊಂಡು ಹೋಗಿದ್ದಾರೆ. ಸುನೀತಾ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ, ಆ ಮಕ್ಕಳು ಜನಿಸಿದ ಸ್ವಲ್ಪ ಸಮಯದ ನಂತರ ನಿಧನ ಹೊಂದಿದವು. ಇದರ ನಂತರ, ಕುಮಾರ್ ತನ್ನ ಗೆಳತಿಯನ್ನು ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಲು ಪ್ರಾರಂಭಿಸಿದ್ದಾನೆ. ಇದು ದಂಪತಿ ನಡುವೆ ಆಗಾಗ ಜಗಳಗಳಿಗೆ ಕಾರಣವಾಯಿತು. ಕೊನೆಗೆ, ಸುನೀತಾ ತನ್ನ ಪತಿಯನ್ನು ತೊರೆದು ತನ್ನ ಹೆತ್ತವರ ಮನೆಗೆ ಮರಳಿದರು.
