ಉದಯವಾಹಿನಿ,ಬಿಹಾರ: ವಿಧಾನ ಸಭಾ ಚುನಾವಣೆಯ ಸಿದ್ಧತೆಯಲ್ಲಿರುವ ಬಿಹಾರದಲ್ಲಿ (Bihar Assembly ಇದೀಗ ಎಲ್ಲ ಸ್ಥಾನಗಳಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನೇತೃತ್ವದ ಜನತಾದಳ ಪಕ್ಷ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಇದರಲ್ಲಿ ನಾಲ್ವರು ಹಾಲಿ ಶಾಸಕರನ್ನು ಕೈ ಬಿಡುವ ಸಾಧ್ಯತೆ ಇದೆ. ರಾಜ್ಯ ವಿಧಾನಸಭೆಯ 243 ಸ್ಥಾನಗಳಲ್ಲಿ 103 ಸ್ಥಾನಗಳಿಗೆ ಪಕ್ಷ ಸ್ಪರ್ಧಿಸುವ ಸಾಧ್ಯತೆಯಿದೆ. ಶೀಘ್ರದಲ್ಲೇ ಹಿರಿಯ ನಾಯಕರು ಈ ಕುರಿತು ಘೋಷಣೆ ಮಾಡುತ್ತಾರೆ ಎಂಬುದಾಗಿ ಹಿರಿಯ ಜೆಡಿ(ಯು) ನಾಯಕಿಯೊಬ್ಬರು ತಿಳಿಸಿದ್ದಾರೆ.
ರಾಜ್ಯಾದ್ಯಂತ ನವೆಂಬರ್ 6 ಮತ್ತು 11 ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ. ಇದಕ್ಕಾಗಿ ಎಲ್ಲ ಪಕ್ಷಗಳು ಈಗ ಸಿದ್ದತೆಯಲ್ಲಿ ತೊಡಗಿಕೊಂಡಿವೆ.ಪಕ್ಷ ಸ್ಪರ್ಧಿಸಲಿರುವ ಸ್ಥಾನಗಳನ್ನು ಗುರುತಿಸಲಾಗಿದೆ. ಅಭ್ಯರ್ಥಿಗಳನ್ನು ಕೂಡ ಅಂತಿಮಗೊಳಿಸಲಾಗಿದೆ. ಕಳಪೆ ಪ್ರದರ್ಶನ ತೋರಿರುವ ನಾಲ್ವರು ಶಾಸಕರ ಬದಲಿಗೆ ಹೊಸಬರನ್ನು ಕಣಕ್ಕೆ ಇಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಶಾಸಕ ಸಂಜೀವ್ ಕುಮಾರ್ ಕಳೆದ ವಾರ ಆರ್‌ಜೆಡಿಗೆ ಸೇರ್ಪಡೆಗೊಂಡಿದ್ದು ಇವರ ಖಗಾರಿಯಾದ ಪರ್ಬಟ್ಟಾ ಸ್ಥಾನಕ್ಕೂ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು. ಮಾಜಿ ಶಾಸಕಿ ಬಿಮಾ ಭಾರ್ತಿ ಅವರ ರುಪೌಲಿ ವಿಧಾನಸಭಾ ಕ್ಷೇತ್ರದಲ್ಲೂ ಹೊಸಬರನ್ನು ಕಣಕ್ಕೆ ಇಳಿಸಲಾಗುವುದು ಎಂದು ಅವರು ಹೇಳಿದರು.
ಭಾಗಲ್ಪುರ, ನವಾಡ, ಬಂಕಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಾಲ್ವರು ಹೊಸಬರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಆಯಾ ಕ್ಷೇತ್ರಗಳ ಮತದಾರರ ಪ್ರತಿಕ್ರಿಯೆಯನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗುತ್ತದೆ. ಮುಂಬರುವ ಚುನಾವಣೆಯಲ್ಲಿ ಕಳಪೆಪ್ರದರ್ಶನ ತೋರಿರುವ ಶಾಸಕರಿಗೆ ಅವಕಾಶವಿಲ್ಲ ಎಂದು ಕೇಂದ್ರ ನಾಯಕರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಅವರು ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 102 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ ಈಗ ಹೆಚ್ಚಿನ ಸ್ಥಾನಗಳನ್ನು ಕೇಳುತ್ತಿದ್ದು, ಇತರ ಎನ್‌ಡಿಎ ಪಾಲುದಾರರಾದ ಹಿಂದೂಸ್ತಾನಿ ಅವಾಮ್ ಮೋರ್ಚಾ ಮತ್ತು ರಾಷ್ಟ್ರೀಯ ಲೋಕ ಮೋರ್ಚಾ ಕೂಡ ಉತ್ತಮ ಸಂಖ್ಯೆಯ ಸ್ಥಾನಗಳನ್ನು ಪಡೆಯಲಿವೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!