ಉದಯವಾಹಿನಿ, ಪಶ್ಚಿಮ ಬಂಗಾಳ: ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ನಡೆದಿದೆ. ದುರ್ಗಾಪುರದ ಐಕ್ಯೂ ಸಿಟಿ ವೈದ್ಯಕೀಯ ಕಾಲೇಜಿನಲ್ಲಿ ಎರಡನೇ ವರ್ಷದ ಎಂಬಿಬಿಎಸ್ ಓದುತ್ತಿದ್ದ ಒಡಿಶಾ ಮೂಲದ ವಿದ್ಯಾರ್ಥಿನಿಯ ಮೇಲೆ ಆಸ್ಪತ್ರೆ ಆವರಣದಲ್ಲೇ ಶುಕ್ರವಾರ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಮೂವರನ್ನು ಪೊಲೀಸರು ಬಂಧಿಸಿರುವುದಾಗಿ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಒಡಿಶಾದ ಜಲೇಶ್ವರ ಮೂಲದವಳಾದ ವಿದ್ಯಾರ್ಥಿನಿ ದುರ್ಗಾಪುರದ ಶಿವಪುರ ಪ್ರದೇಶದ ಐಕ್ಯೂ ಸಿಟಿ ವೈದ್ಯಕೀಯ ಕಾಲೇಜಿನಲ್ಲಿ ಎರಡನೇ ವರ್ಷದ ಎಂಬಿಬಿಎಸ್ ಓದುತ್ತಿದ್ದಳು. ಆಕೆ ತನ್ನ ಸ್ನೇಹಿತರೊಬ್ಬರ ಜೊತೆ ಕ್ಯಾಂಪಸ್ ಹೊರಗೆ ಊಟಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಆಕೆಯ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ ವಿದ್ಯಾರ್ಥಿನಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಿದರು. ಘಟನೆಗೆ ಸಂಬಂಧಿಸಿ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿನಿ ಜೊತೆಗಿದ್ದ ಸ್ನೇಹಿತ ಸೇರಿದಂತೆ ಇತರ ವ್ಯಕ್ತಿಗಳನ್ನು ವಿಚಾರಣೆ ನಡೆಸಿದ್ದಾರೆ.
