ಉದಯವಾಹಿನಿ, ಅರ್ಜೆಂಟೀನಾ: ಶ್ರೇಷ್ಠ ಫುಟ್ಬಾಲ್ ಆಟಗಾರ ಲಿಯೋನಲ್ ಮೆಸ್ಸಿ ವರ್ಷಾಂತ್ಯದಲ್ಲಿ ಭಾರತಕ್ಕೆ ಆಗಮಿಸುವುದು ಈಗಾಗಲೇ ಖಚಿತವಾಗಿದೆ. ಇದೀಗ ಮೆಸ್ಸಿ ಜತೆ ಇನ್ನಿಬ್ಬರು ಖ್ಯಾತ ಫುಟ್ಬಾಲ್ ಆಟಗಾರರು ಕೂಡ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಅರ್ಜೆಂಟೀನಾ ವಿಶ್ವಕಪ್ ವಿಜೇತ ರೊಡ್ರಿಗೋ ಡಿ ಪಾಲ್ ಮತ್ತು ಉರುಗ್ವೆಯ ದಂತಕಥೆ ಲೂಯಿಸ್ ಸುವಾರೆಜ್ ಕೂಡ ಮೆಸ್ಸಿ ಜತೆಗಿರಲಿದ್ದಾರೆ ಎಂದು ಆಯೋಜಕರಲ್ಲಿ ಓರ್ವರಾದ ಸತಾದ್ರು ದತ್ತಾ ಖಚಿತಪಡಿಸಿಕೊಂಡಿದ್ದಾರೆ. ಇದು ದೇಶಾದ್ಯಂತದ ಫುಟ್ಬಾಲ್ ಅಭಿಮಾನಿಗಳು ಮತ್ತಷ್ಟು ಉತ್ಸುಕರನ್ನಾಗಿಸಿದೆ.
ಫುಟ್ಬಾಲ್ ಅಭಿಮಾನಿಗಳ ಸಂಭ್ರಮದಲ್ಲಿ ಈ ಮೂವರು ಆಟಗಾರರು ‘GOAT ಕಪ್’ ಪಂದ್ಯಗಳೊಂದಿಗೆ ಕೋಲ್ಕತ್ತಾ, ಅಹಮದಾಬಾದ್, ಮುಂಬೈ ಮತ್ತು ನವದೆಹಲಿಯನ್ನು ರಂಜಿಸಲಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಡಿ.13ರಿಂದ ಡಿ.15ರವರೆಗೆ ಮೆಸ್ಸಿ ಕೋಲ್ಕತಾ, ಅಹಮದಾಬಾದ್, ಮುಂಬೈ ಹಾಗೂ ನವದೆಹಲಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಮೆಸ್ಸಿ ತಮ್ಮ ಭಾರತ ಪ್ರವಾಸವನ್ನು ಅಧಿಕೃತವಾಗಿ ಪ್ರಕಟಿಸಿದ್ದರು. ಭಾರತ ಪ್ರವಾಸವನ್ನು “ಗೌರವ” ಎಂದು ಬಣ್ಣಿಸಿದ್ದರು. 2011 ರಲ್ಲಿ ಅರ್ಜೆಂಟೀನಾ ಜತೆ ಕೊನೆಯ ಬಾರಿಗೆ ಭೇಟಿ ನೀಡಿದ ಉತ್ಸಾಹಭರಿತ ಫುಟ್ಬಾಲ್ ರಾಷ್ಟ್ರಕ್ಕೆ ಮರಳುವ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದ್ದರು.
