ಉದಯವಾಹಿನಿ, ಪೋಷಕರ ವಾದ, ಜಗಳ ಹಾಗೂ ಸೋಶಿಯಲ್ ಮೀಡಿಯಾ ಮಕ್ಕಳ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರುತ್ತಿವೆ. ಮಕ್ಕಳು ಬೆಳೆಯುತ್ತಿರುವ ವಯಸ್ಸಿನಲ್ಲಿ ತಪ್ಪು ದಾರಿ ಹಿಡಿಯುವಂತೆ ಮಾಡುತ್ತವೆ. ಅನೇಕ ಮಕ್ಕಳು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮಗುವಿನ ಬಾಲ್ಯ ದಾರಿ ತಪ್ಪಲು ಕೌಟುಂಬಿಕ ವಾತಾವರಣವೇ ಪ್ರಮುಖ ಕಾರಣ ಎಂದು ಮನಶ್ಶಾಸ್ತ್ರಜ್ಞರು ತಿಳಿಸುತ್ತಾರೆ. ಕೌಟುಂಬಿಕ ಕಲಹಗಳು ಮಕ್ಕಳ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿಯೋಣ.ಕಳ್ಳತನ, ಲೈಂಗಿಕ ದೌರ್ಜನ್ಯ ಮತ್ತು ಮಾದಕವಸ್ತು ಪ್ರಕರಣಗಳಲ್ಲಿ ಸಿಕ್ಕಿಬಿದ್ದ ಹೆಚ್ಚಿನ ಆರೋಪಿಗಳು ಕೌಟುಂಬಿಕ ಸಮಸ್ಯೆಗಳಿಂದ ದಾರಿ ತಪ್ಪಿದವರಾಗಿರುತ್ತಾರೆ. ಪೋಷಕರ ಪ್ರೀತಿ ಮತ್ತು ಮೇಲ್ವಿಚಾರಣೆಯ ಕೊರತೆಯಿಂದ ಮಕ್ಕಳು ಬೇರೆಡೆ ಸಂತೋಷವನ್ನು ಹುಡುಕುತ್ತಾ ತಪ್ಪು ಮಾಡುತ್ತಾರೆ.
ಈ ಹಿನ್ನೆಲೆಯಲ್ಲಿ ಮಕ್ಕಳು ಸಾಮಾಜಿಕ ಮಾಧ್ಯಮ, ವಿಡಿಯೋ ಗೇಮ್‌ಗಳು ಹಾಗೂ ಮಾದಕವಸ್ತುಗಳಿಗೆ ವ್ಯಸನಿಯಾಗುತ್ತಿದ್ದಾರೆ. ಇವುಗಳನ್ನು ಪಡೆಯಲು ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ ಎಂದು ಮನಶ್ಶಾಸ್ತ್ರ ಡಾ.ಮಮತಾ ರಘುವೀರ್ ತಿಳಿಸುತ್ತಾರೆ. ಪೋಷಕರು ಎಷ್ಟೇ ಕೆಲಸದ ಒತ್ತಡದಲ್ಲಿದ್ದರೂ ಪರಿಸ್ಥಿತಿ ಎಷ್ಟೇ ಕಷ್ಟಕರವಾಗಿದ್ದರೂ ತಮ್ಮ ಮಕ್ಕಳ ಚಲನವಲನಗಳು, ಭಾವನೆಗಳು ಮತ್ತು ಅಭ್ಯಾಸಗಳನ್ನು ಮೇಲ್ವಿಚಾರಣೆ ಮಾಡಬೇಕು ಎಂದು ತಿಳಿಸುತ್ತಾರೆ.
ನಡೆಸಿದ ಅಧ್ಯಯನವು ಪೋಷಕರ ನಡುವಿನ ಹೆಚ್ಚಿನ ಮಟ್ಟದ ಸಂಘರ್ಷ ಮತ್ತು ಹಗೆತನವು ಮಕ್ಕಳ ಭಾವನಾತ್ಮಕ, ಸಾಮಾಜಿಕ ಹಾಗೂ ನಡವಳಿಕೆಯ ಸಮಸ್ಯೆಗಳನ್ನು ಬೆಳೆಸುವ ಅಪಾಯ ಹೆಚ್ಚಿಸುತ್ತದೆ. ಜೊತೆಗೆ ಏಕಾಗ್ರತೆ ಹಾಗೂ ಶೈಕ್ಷಣಿಕ ಸಾಧನೆಯಲ್ಲಿ ತೊಂದರೆಗಳನ್ನು ಹೆಚ್ಚಿಸುತ್ತದೆ.
ಕೌಟುಂಬಿಕ ಸಮಸ್ಯೆಗಳು: ಪ್ರಸ್ತುತ ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿವೆ. ಸಣ್ಣ ಕುಟುಂಬಗಳಲ್ಲಿ ಗಂಡ ಮತ್ತು ಹೆಂಡತಿ ಮತ್ತು ಒಬ್ಬರು ಅಥವಾ ಇಬ್ಬರು ಮಕ್ಕಳು ಮಾತ್ರ ವಾಸವಾಗಿರುತ್ತಾರೆ. ಪೋಷಕರು ಇಬ್ಬರೂ ಉದ್ಯೋಗದಲ್ಲಿದ್ದರೆ, ಅವರು ಮಕ್ಕಳನ್ನು ಬೆಳೆಸುವತ್ತ ಸಂಪೂರ್ಣವಾಗಿ ಗಮನಹರಿಸಲು ಸಾಧ್ಯವಾಗದೇ ಕಷ್ಟವಾಗಬಹುದು. ಪಾಲಕರು ಕೆಲಸದ ಒತ್ತಡದಿಂದ ಬೇಸತ್ತಿದ್ದರೆ ಅವರು ಮಕ್ಕಳ ನಡವಳಿಕೆ ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.
ಕುಟುಂಬದಲ್ಲಿನ ಹಣಕಾಸಿನ ತೊಂದರೆಗಳು, ಘರ್ಷಣೆಗಳು ಮತ್ತು ಅಕ್ರಮ ಸಂಬಂಧಗಳು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡುತ್ತವೆ. ಪ್ರತಿ ಬಾರಿ ಗಂಡ ಮತ್ತು ಹೆಂಡತಿ ಜಗಳವಾಡಿದ ಸಂದರ್ಭದಲ್ಲಿ ಮಕ್ಕಳು ಆ ಪರಿಣಾಮದಿಂದ ಪ್ರಭಾವಿತರಾಗುತ್ತಾರೆ. ಜೊತೆಗೆ ಮಕ್ಕಳು ಯಾರೊಂದಿಗೆ ಸ್ನೇಹ ಬೆಳೆಸಿದ್ದಾರೆ ಎಂಬುದನ್ನು ಗಮನಿಸುವುದು ಅಗತ್ಯ. ಮಕ್ಕಳು ತಮ್ಮ ಇಡೀ ದಿನವನ್ನು ಹೇಗೆ ಕಳೆಯುತ್ತಾರೆ ಎಂದು ನಿಗಾ ವಹಿಸಬೇಕು.
