ಉದಯವಾಹಿನಿ ಗಡ್ಡೆ-ಗೆಣಸುಗಳ ಕಾಲವಿದು. ಮಳೆಗಾಲದಲ್ಲಿ ಭೂಮಿಯೊಳಗೆ ಸೊಂಪಾಗಿ ಬೆಳೆದ ಬಹಳಷ್ಟು ಗಡ್ಡೆಗಳನ್ನು ಈಗ ತೆಗೆದು ಬಳಸಲಾಗುತ್ತದೆ. ಅರಿಶಿನ, ಸಿಹಿ ಗೆಣಸು, ಮರಗೆಣಸು, ಸುವರ್ಣ ಗಡ್ಡೆ ಮುಂತಾದವು ಈಗ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಇವುಗಳಲ್ಲಿ ಸುವರ್ಣ ಗಡ್ಡೆಯನ್ನು ಕೃಷಿ ಮಾಡುವುದಕ್ಕಿಂತ, ಅದು ತನ್ನಷ್ಟಕ್ಕೆ ಬೆಳೆಯುವುದೇ ಹೆಚ್ಚು. ಕಾಡು, ಬೆಟ್ಟದಂಥ ಜಾಗಗಳಲ್ಲಿ ಬೆಳೆಯುವ ಕಾಡು ಸುವರ್ಣ ಗಡ್ಡೆಯನ್ನು ಸಾಮಾನ್ಯವಾಗಿ ಮಳೆಗಾಲದಲ್ಲಿ ತೆಗೆಯಲಾಗುತ್ತದೆ. ಆದರೆ ಮನೆ ಬದಿಯ ಹಿತ್ತಲುಗಳಲ್ಲಿ ಬೆಳೆಯುವ ಆನೆ ಕಾಲಿನಂತೆ ಕಾಣುವ ಸಾಮಾನ್ಯ ಸುವರ್ಣ ಗಡ್ಡೆಯನ್ನು ಮಣ್ಣಿಂದ ತೆಗೆಯುವುದು ದೀಪಾವಳಿಯ ಹಿಂದೆ-ಮುಂದೆ ಅಥವಾ ಚಳಿಗಾಲದ ಆರಂಭದಲ್ಲಿ. ಹಲವು ರೀತಿಯ ಅಡುಗೆಗಳಿಗೆ ಇದನ್ನು ಬಳಸಲಾಗುತ್ತದೆ. ಸಾಂಬಾರ್, ಪಲ್ಯ, ಕೂಟು, ಬಾಜಿ, ಪೋಡಿ, ಬಜ್ಜಿ ಮುಂತಾಗಿ ಯಾವುದೇ ಪಕ್ವಾನ್ನಕ್ಕೂ ಹೊಂದಿಕೊಳ್ಳಬಲ್ಲ ರುಚಿ ಇದರದ್ದು. ಏನಿದರ ಸೇವನೆಯ ಲಾಭಗಳು ಎಂಬುದನ್ನು ನೋಡೋಣ.
ಮಧುಮೇಹಿಗಳಿಗೆ ಅನುಕೂಲ: ಸುವರ್ಣ ಗಡ್ಡೆಯಲ್ಲಿರುವ ಅಲ್ಲನ್‌ಟೋನ್ ಎಂಬ ರಾಸಾಯನಿಕವು ಮಧುಮೇಹಿಗಳಿಗೆ ಅಗತ್ಯವಾದಂಥ ಪರಿಣಾಮವನ್ನು ನೀಡಬಲ್ಲದು ಎಂಬುದನ್ನು ವೈಜ್ಞಾನಿಕ ಪ್ರಯೋಗಗಳು ಹೇಳುತ್ತವೆ. ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಳಿತ ಆಗದಂತೆ ನಿರ್ವಹಿಸುವ ಸಾಧ್ಯತೆ ಈ ರಾಸಾಯನಿಕಕ್ಕಿದೆ. ಇದರಲ್ಲಿ ನಾರಿನಂಶವೂ ಹೇರಳವಾಗಿದ್ದು, ಗ್ಲೈಸೆಮಿಕ್ ಸೂಚಿಯೂ ಕಡಿಮೆಯೇ ಇದೆ. ಹಾಗಾಗಿ ಸಕ್ಕರೆ ಕಾಯಿಲೆ ಇದ್ದವರಿಗೆ ಇದು ಸೇವಿಸಲು ಸೂಕ್ತವಾದಂಥ ಆಹಾರ.
ಕ್ಯಾನ್ಸರ್ ತಡೆ: ಇದರಲ್ಲಿರುವ ಎಲ್-ಆರ್ಜಿನೈನ್ ಎಂಬ ಸಂಯುಕ್ತವು ಕೆಲವು ರೀತಿಯ ಕ್ಯಾನ್ಸರ್ ಭೀತಿಯನ್ನು ದೂರ ಮಾಡುತ್ತದೆ. ಕ್ಯಾನ್ಸರ್‌ಗೆ ಪ್ರತಿಯಾಗಿ ದೇಹಕ್ಕೆ ಅಗತ್ಯವಾದ ಪ್ರತಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ. ಅಂದರೆ, ಇದರಿಂದ ಕ್ಯಾನ್ಸರ್ ಗುಣವಾಗುತ್ತದೆ ಎಂದಲ್ಲ. ಆದರೆ ಚಿಕಿತ್ಸೆಯ ಸಂದರ್ಭದಲ್ಲಿ ದೇಹಕ್ಕೆ ಕೆಲವು ಅಗತ್ಯವಾದ ಅಂಶಗಳನ್ನು ಒದಗಿಸಬಲ್ಲದು.
