ಉದಯವಾಹಿನಿ, ಪಾಟ್ನಾ: ಬಿಹಾರ ಚುನಾವಣೆ ಘೋಷಣೆಯಾದ ದಿನದಿಂದಲೂ ಕಾಡುತ್ತಿದ್ದ ಸಮಸ್ಯೆ ಈಗ ಬಗೆಹರಿದಿದೆ. ಚುನಾವಣೆಯಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರದ ಮಿತ್ರ ಪಕ್ಷಗಳಲ್ಲಿ ತಲೆದೋರಿದ್ದ ಸೀಟು ಹಂಚಿಕೆ ಕಗ್ಗಂಟು ಕಡೆಗೂ ಇತ್ಯರ್ಥವಾಗಿದೆ. ಅದರಂತೆ ಬಿಜೆಪಿ, ಎನ್‌ಡಿಎ ಪಕ್ಷಗಳು ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಚಿರಾಗ್ ಪಾಸ್ವಾನ್ ಅವರ ಲೋಕಜನಶಕ್ತಿ ಪಾರ್ಟಿ (ರಾಮ್ ವಿಲಾಸ್ ಪಾಸ್ವಾನ್ ಬಣ) 29 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.
ಸೀಟು ಹಂಚಿಕೆ ಪಟ್ಟಿಯನ್ನು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಬಿಡುಗಡೆ ಮಾಡಿದ್ದಾರೆ. 243 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬಿಹಾರದಲ್ಲಿ ಎನ್‌ಡಿಎ ಪ್ರಮುಖ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಯು ತಲಾ 101 ಸೀಟುಗಳಲ್ಲಿ ಸ್ಪರ್ಧಿಸಲಿದ್ದು, ಚಿರಾಗ್ ಪಾಸ್ವಾನ್ ಅವರ ಲೋಕಜನಶಕ್ತಿ ಪಾರ್ಟಿ (ರಾಮ್ ವಿಲಾಸ್ ಪಾಸ್ವಾನ್ ಬಣ) 29 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ರಾಷ್ಟ್ರೀಯ ಲೋಕ ಮೋರ್ಚಾ ಹಾಗೂ ಜಿತನ್ ರಾಮ್ ಮಾಂಝಿಯವರ ಹಿಂದೂಸ್ತಾನ್ ಆವಮ್ ಮೋರ್ಚಾ ಪಕ್ಷಗಳು ತಲಾ 6 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.
ಬಗೆಹರಿದ ದುಗುಡ: ಲೋಕಜನಶಕ್ತಿ ಪಾರ್ಟಿಯ ಮುಖ್ಯಸ್ಥ ಚಿರಾಗ್ ಪಾಸ್ವಾನ್ 40-45 ಸ್ಥಾನಗಳಿಗೆ ಬೇಡಿಕೆಯಿಡುತ್ತಾ ಬಂದಿದ್ದರು. ಆದ್ರೆ ಬಿಜೆಪಿ 25 ಸ್ಥಾನಗಳನ್ನು ನೀಡಲು ಮಾತ್ರವೇ ಒಪ್ಪಿಕೊಂಡಿತ್ತು. ಈ ನಡುವೆ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಅವರ ಜನ್ ಸೂರಜ್ ಪಕ್ಷ ಪಾಸ್ವಾನ್ ಅವರನ್ನ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿತ್ತು. ಸೀಟು ಹಂಚಿಕೆ ಕುರಿತು ಎಲ್‌ಜೆಪಿ ತನ್ನ ನಿರ್ಧಾರ ಬದಲಾಯಿಸುವಂತೆ ಮನವೊಲಿಸಲು ಧರ್ಮೇಂದ್ರ ಪ್ರಧಾನ್ ಹಲವಾರು ಸುತ್ತಿನ ಸಭೆ ನಡೆಸಿದರು. ಕೊನೆಗೆ ಜೆಡಿಯು, ಬಿಜೆಪಿ ಒಮ್ಮತದ ಮೇರೆಗೆ 29 ಸ್ಥಾನಗಳನ್ನ ಹಂಚಿಕೆ ಮಾಡಲಾಯಿತು.
