ಉದಯವಾಹಿನಿ, ಬರ್ನ್: 2035ರ ವೇಳೆಗೆ ರಾಜ್ಯವನ್ನು 20 ಶತಕೋಟಿ ಡಾಲರ್ ಕ್ವಾಂಟಮ್ ಆರ್ಥಿಕ ರಾಜ್ಯವಾಗಿ ಅಭಿವೃದ್ಧಿಪಡಿಸಲು ದಿಟ್ಟ ಹೆಜ್ಜೆಗಳನ್ನು ಕರ್ನಾಟಕ ಸರ್ಕಾರ ಇಟ್ಟಿದೆ. ಬೆಂಗಳೂರು ನಗರದಲ್ಲಿ ಕ್ಯೂ-ಸಿಟಿ (Q- ಕ್ವಾಂಟಮ್ ಸಿಟಿ) ಸ್ಥಾಪಿಸಲು ಅಗತ್ಯ ಭೂಮಿಯನ್ನು ನಿಗದಿಪಡಿಸಲಾಗಿದೆ. ಕ್ವಾಂಟಮ್ ಕ್ಷೇತ್ರದಲ್ಲಿ ಸಹಭಾಗಿತ್ವ, ಸಂಶೋಧನೆ ಹಾಗೂ ಆವಿಷ್ಕಾರಕ್ಕೆ ವಿಫುಲ ಅವಕಾಶಗಳಿದ್ದು, ಸಹಭಾಗಿತ್ವದ ಸಂಶೋಧನೆಗೆ ಕರ್ನಾಟಕ ರಾಜ್ಯ ಸರ್ಕಾರದ ಜೊತೆ ಕೈಜೋಡಿಸುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ಎಸ್ ಬೋಸರಾಜು ಕರೆ ನೀಡಿದರು.
ಸ್ವಿಟ್ಜರ್ಲೆಂಡ್‌ನ ಜಿನೆವಾದ ಬಯೋಟೆಕ್ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದ್ದ ‘ಸ್ವಿಸ್‌ನೆಕ್ಸ್ ಕ್ವಾಂಟಮ್ ಸಮಿಟ್ 2025’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಕ್ವಾಂಟಮ್ ಕ್ಷೇತ್ರದ ಅಭಿವೃದ್ದಿಯಲ್ಲಿ ರಾಜ್ಯ ಸರ್ಕಾರ ಇಟ್ಟಿರುವಂತಹ ದಿಟ್ಟ ಹೆಜ್ಜೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು. ಭಾರತ ಸರ್ಕಾರವು ಸುಮಾರು 6,000 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಕ್ವಾಂಟಮ್ ಮಿಷನ್ (NQM) ಆರಂಭಿಸಿದೆ. ಈ ಮಿಷನ್ ನಾವೀನ್ಯತೆ, ಕೌಶಲ್ಯ ಮತ್ತು ಸ್ಟಾರ್ಟ್-ಅಪ್ ಬೆಂಬಲದ ಮೂಲಕ 50ರಿಂದ 1000ಕ್ಯೂ ಬಿಟ್ ಕ್ವಾಂಟಮ್ ಕಂಪ್ಯೂಟರ್‌ಗಳನ್ನು ಅಭಿವೃದ್ಧಿಪಡಿಸುವುದು, ಸುರಕ್ಷಿತ ಕ್ವಾಂಟಮ್ ಸಂವಹನ ಜಾಲಗಳನ್ನು ನಿರ್ಮಿಸುವುದು ಮತ್ತು ಕಂಪ್ಯೂಟಿಂಗ್, ಸಂವಹನ, ಸಂವೇದನೆ ಮತ್ತು ಸಾಮಗ್ರಿಗಳಿಗಾಗಿ ರಾಷ್ಟ್ರೀಯ ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಕರ್ನಾಟಕ ರಾಜ್ಯವು ಈ ರಾಷ್ಟ್ರೀಯ ದೃಷ್ಟಿಕೋನವನ್ನು ಅಳವಡಿಸಿಕೊಂಡಿರುವ ಪ್ರಮುಖ ರಾಜ್ಯವಾಗಿ ಹೊರಹೊಮ್ಮಿದೆ ಎಂದರು.
