ಉದಯವಾಹಿನಿ, ಟೆಲ್ ಅವೀವ್: ದೀರ್ಘಕಾಲದಿಂದ ನಡೆಯುತ್ತಿದ್ದ ಹಮಾಸ್ ನಡುವಿನ ಯುದ್ಧ ಅಂತ್ಯವಾಗುವ ಕಾಲ ಕೂಡಿಬಂದಿದೆ. ಕಳೆದ ಎರಡು ವರ್ಷಗಳಿಂದ ಗಾಜಾದಲ್ಲಿ ಹಿಡಿದಿಟ್ಟುಕೊಂಡಿದ್ದ ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ನಡೆದ ಮಹತ್ವದ ಕದನ ವಿರಾಮ ಒಪ್ಪಂದದ ನಂತರ ಹಮಾಸ್ ಸೆರೆಯಲ್ಲಿದ್ದ ಇಸ್ರೇಲಿ ಒತ್ತೆಯಾಳುಗಳನ್ನು ರೆಡ್ ಕ್ರಾಸ್ ವಶಕ್ಕೆ ನೀಡಲಾಗಿದೆ. ಒತ್ತೆಯಾಳುಗಳನ್ನು ಎರಡು ಹಂತಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಮೊದಲ ಹಂತದಲ್ಲಿ 7 ಮತ್ತು ಎರಡನೇ ಹಂತದಲ್ಲಿ 13 ಮಂದಿಯನ್ನು ದಕ್ಷಿಣ ಗಾಜಾದ ಖಾನ್ ಯೂನಿಸ್‌ನಲ್ಲಿ ಹಸ್ತಾಂತರಿಸಲಾಗಿದೆ ಎಂದು ಇಸ್ರೇಲ್‌ನ ಸಾರ್ವಜನಿಕ ಪ್ರಸಾರ ಸಂಸ್ಥೆ ವರದಿ ಮಾಡಿದೆ.
ಸೆರೆಯಲ್ಲಿದ್ದವರ ಆರೋಗ್ಯ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇಸ್ರೇಲ್‌ನಾದ್ಯಂತ ಸಾವಿರಾರು ಜನರು ದೊಡ್ಡ ದೊಡ್ಡ ಸ್ಕ್ರೀನ್‌ಗಳಲ್ಲಿ ಬಿಡುಗಡೆ ಪ್ರಕ್ರಿಯೆ ವೀಕ್ಷಿಸುತ್ತಾ ಘೋಷಣೆ ಕೂಗುತ್ತಿರುವುದು ಕಂಡುಬಂದಿದೆ. ಮೊದಲ ಹಂತದಲ್ಲಿ ಬಿಡುಗಡೆಯಾದ 7 ಮಂದಿಯನ್ನು ರೀಮ್‌ನ ಐಡಿಎಫ್‌ಗೆ ಕರೆದುಕೊಂಡು ಬಂದಿದ್ದು, ಅಲ್ಲಿ ಅವರು ಕುಟುಂಬಸ್ಥರನ್ನು ಭೇಟಿಯಾಗಲಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
