ಉದಯವಾಹಿನಿ, ತ್ರಿಪುರ: ಶಂಕಿತ ಪಾಕಿಸ್ತಾನದ ಮಹಿಳೆಯೊಬ್ಬಳು ಬಾಂಗ್ಲಾದೇಶಕ್ಕೆ ಹೋಗುವ ಉದ್ದೇಶದಿಂದ ಭಾರತಕ್ಕೆ ಬಂದಿದ್ದು ಆಕೆಯನ್ನು ತ್ರಿಪುರಾದಲ್ಲಿ ಬಂಧಿಸಲಾಗಿದೆ. ಆಕೆ ನೇಪಾಳದ ಜೈಲಿನಿಂದ ತಪ್ಪಿಸಿಕೊಂಡಿದ್ದಳು ಎನ್ನಲಾಗಿದೆ. ಮಾದಕವಸ್ತು ಕಳ್ಳ ಸಾಗಣೆ ಆರೋಪದಲ್ಲಿ ಬಂಧಿಸಲಾಗಿರುವ ಪಾಕಿಸ್ತಾನಿ ಪ್ರಜೆ ಮತ್ತು ನೇಪಾಳದ ಜೈಲ್ ಬ್ರೇಕರ್ ಲೂಯಿಸ್ ನಿಘತ್ ಅಖ್ತರ್ ಭಾನೋ (65) ಎಂಬಾಕೆಯನ್ನು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ದಕ್ಷಿಣ ತ್ರಿಪುರ ಜಿಲ್ಲೆಯ ಗಡಿ ಪಟ್ಟಣ ಸಬ್ರೂಮ್ ನ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಸಬ್ರೂಮ್ ಪೊಲೀಸ್ ಅಧಿಕಾರಿ ನಿತ್ಯಾನಂದ ಸರ್ಕಾರ್, ನೇಪಾಳ ಜೈಲಿನಿಂದ ತಪ್ಪಿಸಿಕೊಂಡ ಪಾಕಿಸ್ತಾನ ಮೂಲದ ಮಹಿಳೆ ಲೂಯಿಸ್ ನಿಘತ್ ಅಖ್ತರ್ ಭಾನೋ ಎಂಬಾಕೆಯನ್ನು ಸಬ್ರೂಮ್ ನ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದ್ದು, ವಿಚಾರಣೆಗಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದರು ಎಂದು ತಿಳಿಸಿದ್ದಾರೆ.
ಲೂಯಿಸ್ ನಿಘತ್ ಅಖ್ತರ್ ಭಾನೋ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದು, ಇಲ್ಲಿಂದ ಬಾಂಗ್ಲಾದೇಶಕ್ಕೆ ಹೋಗುವ ಉದ್ದೇಶ ಹೊಂದಿದ್ದಳು ಎಂದು ಶಂಕಿಸಲಾಗಿದೆ. ಆಕೆಯ ಚಲನವಲನಗಳು ಮತ್ತು ಉದ್ದೇಶಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಪೊಲೀಸರು ಮತ್ತು ಇತರ ಭದ್ರತಾ ಸಂಸ್ಥೆಗಳು ಆಕೆಯನ್ನು ವಿಚಾರಣೆ ನಡೆಸುತ್ತಿವೆ ಎಂದು ನಿತ್ಯಾನಂದ ಸರ್ಕಾರ್ ತಿಳಿಸಿದ್ದಾರೆ.ಆಕೆ ನೇಪಾಳ ಜೈಲಿನಿಂದ ತಪ್ಪಿಸಿಕೊಂಡಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿದೆ. ಜೊತೆಗೆ ಪಾಕಿಸ್ತಾನದ ಸಂಪರ್ಕವನ್ನೂ ಆಕೆ ಹೊಂದಿದ್ದಾಳೆ. ಆದರೂ ಆಕೆಯ ರಾಷ್ಟ್ರೀಯತೆ ಇನ್ನೂ ದೃಢೀಕರಿಸಲಾಗಿಲ್ಲ. ಆಕೆಯ ಗುರುತು ಮತ್ತು ಹಿನ್ನೆಲೆಯನ್ನು ಪರಿಶೀಲಿಸಲು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಪಾಕಿಸ್ತಾನದ ಶೇಖುಪುರ ನಿವಾಸಿ ಎಂಡಿ ಗೋಲಾಫ್ ಫರಾಜ್ ಎಂಬ ವ್ಯಕ್ತಿಯ ಪತ್ನಿಯಾಗಿರುವ ಲೂಯಿಸ್ ನಿಘತ್ ಅಖ್ತರ್ ಭಾನೋ ಸುಮಾರು 12 ವರ್ಷಗಳ ಹಿಂದೆ ಪಾಕಿಸ್ತಾನಿ ಪಾಸ್‌ಪೋರ್ಟ್ ಬಳಸಿ ನೇಪಾಳಕ್ಕೆ ಪ್ರವೇಶಿಸಿದ್ದಳು. ಇಲ್ಲಿ ಆಕೆ ಮಾದಕ ವಸ್ತು ಕಳ್ಳಸಾಗಣೆಯನ್ನು ಪ್ರಾರಂಭಿಸಿದ್ದಳು ಎಂದು ಆರೋಪಿಸಲಾಗಿದೆ.
