ಉದಯವಾಹಿನಿ, ಕರುನಾಡಿನ ಹೆಮ್ಮೆಯ ಚಲನಚಿತ್ರ `ಕಾಂತಾರ ಚಾಪ್ಟರ್ 1′ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ವಿಶ್ವದಾದ್ಯಂತ ಅಪಾರ ಮೆಚ್ಚುಗೆಯನ್ನ ಪಡೆದುಕೊಳ್ಳುತ್ತಿದೆ. ಕಾಂತಾರ ಸಿನಿಮಾ ತೆರೆಕಂಡು ಅಭೂತಪೂರ್ವ ಯಶಸ್ಸು ಪಡೆದುಕೊಳ್ಳುತ್ತಿದೆ. ಜೊತೆಗೆ ಬಾಕ್ಸಾಫೀಸ್‌ನಲ್ಲೂ ಕಮಾಲ್ ಮಾಡುತ್ತಿದೆ. ಅಂದಹಾಗೆ ಕಾಂತಾರ ಚಾಪ್ಟರ್-1 ಬಿಡುಗಡೆಯಾದ ಕೇವಲ 11 ದಿನಗಳಲ್ಲಿ ಕರ್ನಾಟಕದಲ್ಲಿ 191 ಕೋಟಿಗೂ ಅಧಿಕ ಗಳಿಕೆ ಮಾಡುವ ಮೂಲಕ ಇದು ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಂದಹಾಗೆ ಕಾಂತಾರ ಚಾಪ್ಟರ್-1 ಸಿನಿಮಾವನ್ನ ಒಂದು ಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಮುಂಬರುವ ಹಬ್ಬದ ವಾರದಲ್ಲಿ, ಚಿತ್ರಮಂದಿರಕ್ಕೆ ಬರುವ ಜನರ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ವಿಶ್ವದಾದ್ಯಂತ ಕಾಂತಾರ ಸಿನಿಮಾ 11 ದಿನಗಳಲ್ಲಿ 655 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಹುಬ್ಬೇರಿಸುವಂತೆ ಮಾಡಿದೆ. ಇನ್ನೇನು ದೀಪಾವಳಿ ಹಬ್ಬದ ರಜಾದಿನಗಳು ಬಂದರೆ ಕಾಂತಾರ ಸಿನಿಮಾ ಮತ್ತಷ್ಟು ಕಲೆಕ್ಷನ್ ಮಾಡಲಿದೆ. ಅಲ್ಲಿಗೆ 1,000 ಕೋಟಿ ಟಾರ್ಗೆಟ್ ಮುಟ್ಟುವ ನಿರೀಕ್ಷೆಗಳು ಸನಿಹದಲ್ಲಿವೆ.

ಸಂಸ್ಕೃತಿ ಮತ್ತು ಆಚಾರ-ವಿಚಾರಗಳ ಬೇರುಗಳನ್ನು ಗಟ್ಟಿಯಾಗಿ ಹಿಡಿದಿರುವ ಈ ಸಿನಿಮಾ, ಶಿವಗಣಗಳ ಮಹತ್ವವನ್ನು ಎತ್ತಿಹಿಡಿದಿರುವ ಕಾಂತಾರ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿದೆ. ಕಾಂತಾರ ದೃಶ್ಯಕಾವ್ಯ ಕಟ್ಟಿಕೊಟ್ಟ ರಿಷಬ್ ಶೆಟ್ಟಿಗೆ ಹೋದ ಕಡೆಗೆಲ್ಲ ಅದ್ಧೂರಿಯಾದ ಸ್ವಾಗತ ಸಿಗುತ್ತಿದೆ. ಸದ್ಯ ಭರ್ಜರಿ ಗೆಲುವಿನಲ್ಲಿರುವ ಕಾಂತಾರ ದಿನದಿಂದ ದಿನಕ್ಕೆ ಕೋಟಿ-ಕೋಟಿಯನ್ನ ತನ್ನ ಕಬಂದ ಬಾಹುವಿನಿಂದ ಬಾಚಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೆಷ್ಟು ಕೋಟಿಯನ್ನ ಕಬಳಿಸಲಿದೆ ಕಾಂತಾರ ಎನ್ನೋ ಕುತೂಹಲ ಶುರುವಾಗಿದೆ.

 

Leave a Reply

Your email address will not be published. Required fields are marked *

error: Content is protected !!