ಉದಯವಾಹಿನಿ, ಮುಂಬೈ: ಸಿಪಿಐ ಪಕ್ಷದ ಹಿರಿಯ ನಾಯಕ ಮತ್ತು ಪಾಲಿಟ್‌ಬ್ಯೂರೋದ ಭಾಗವಾಗಿರುವ ಮಲ್ಲೊಜುಲ ವೇಣುಗೋಪಾಲ್ ರಾವ್ ಅಲಿಯಾಸ್ ಸೋನು, ಮಂಗಳವಾರ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ 60 ಮಾವೋವಾದಿ ಕಾರ್ಯಕರ್ತರೊಂದಿಗೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದಾರೆ. ಕಳೆದ ವಾರ, ತೆಲಂಗಾಣ ಮೂಲದ ಸೋನು ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಎಂಬ ವದಂತಿಗಳು ಕೇಳಿ ಬಂದಿದ್ದವು. ಈ ಕುರಿತು ಆತ ಪತ್ರ ಬರೆದಿದ್ದು, ಕಾರ್ಯಕರ್ತರಿಗೆ “ತಮ್ಮನ್ನು ತಾವು ಉಳಿಸಿಕೊಳ್ಳಿ” ಮತ್ತು “ಅರ್ಥಹೀನ ತ್ಯಾಗ” ಮಾಡಬೇಡಿ ಎಂದು ಕರೆ ನೀಡಿದ್ದ ಎಂದು ತಿಳಿದು ಬಂದಿದೆ.
ಪತ್ರದಲ್ಲಿ, ಸೋನು ತನ್ನ ಸಹಚರರಿಗೆ ಪ್ರಸ್ತುತ ಪರಿಸ್ಥಿತಿಯಲ್ಲಿ ಸಶಸ್ತ್ರ ಹೋರಾಟವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ ಎಂದು ಹೇಳಲಾಗಿದೆ. ಮಾವೋವಾದಿಗಳು ಅನುಸರಿಸಿದ ಮಾರ್ಗವು “ಸಂಪೂರ್ಣವಾಗಿ ತಪ್ಪಾಗಿದೆ” ಎಂದು ಒಪ್ಪಿಕೊಂಡ ಆತ, ಪದೇ ಪದೇ ನಾಯಕತ್ವದ ತಪ್ಪುಗಳು ಮಾವೋವಾದಿಗಳಿಗೆ ದೊಡ್ಡ ಹಿನ್ನಡೆಯನ್ನುಂಟುಮಾಡಿವೆ ಎಂದು ಹೇಳಿದ್ದ. ಪೊಲೀಸರ ಪ್ರಕಾರ, ಸೋನು ಸಿಪಿಐ (ಮಾವೋವಾದಿ) ದ ಉತ್ತರ ಉಪ-ವಲಯ ಮತ್ತು ಪಶ್ಚಿಮ ಉಪ-ವಲಯ ಬ್ಯೂರೋದಿಂದ ಬೆಂಬಲ ಪಡೆದಿದ್ದು, ಅವರು ಮುಖ್ಯವಾಹಿನಿಗೆ ಸೇರಲು ಆಸಕ್ತಿ ವ್ಯಕ್ತಪಡಿಸಿದ್ದಾನ ಎಂದು ತಿಳಿದು ಬಂದಿದೆ. ಆಗಸ್ಟ್ 15 ರಂದು ಸೋನು ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಸಿದ್ಧ ಎಂದು ಹೇಳಿದ್ದ.
ಜಾರ್ಖಂಡ್‌ನಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ಜೋರಾಗಿದೆ. ಜಾರ್ಖಂಡ್ ಪೊಲೀಸರು ಮತ್ತು ಸಿಆರ್ ಪಿಎಫ್ ಜಂಟಿಯಾಗಿ ಬೊಕಾರೊ-ಹಜಾರಿಬಾಗ್ ಗಡಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ನಕ್ಸಲರ ಅಡಗುತಾಣ ಪತ್ತೆಯಾಗಿದೆ. ಈ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವಶಪಡಿಸಿಕೊಳ್ಳುವಿಕೆಯು ಈ ಪ್ರದೇಶದಲ್ಲಿ ನಡೆಯುತ್ತಿದ್ದ ದೊಡ್ಡ ನಕ್ಸಲ್ ಸಂಚನ್ನು ವಿಫಲಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
