ಉದಯವಾಹಿನಿ, ಬಹುತೇಕ ಭಕ್ತಿಪ್ರಧಾನ ಚಿತ್ರಗಳಿಗೆ ಹೆಸರಾದ ಪುರುಷೋತ್ತಮ್ ಓಂಕಾರ್ ಇದೀಗ ಹೊಟ್ಟೆ ಪಾಡಿಗಾಗಿ ಚಿಂದಿ ಆಯುವ ಮಹಿಳೆಯ ಜೀವನದ ಕಥೆ ಹೇಳಹೊರಟಿದ್ದಾರೆ. ರಸ್ತೆ ಬದಿಯಲ್ಲಿ ಚಿಂದಿ ಆಯುತ್ತ ಜೀವನ ಸಾಗಿಸುವ ಮಹಿಳೆಯೊಬ್ಬಳ ಜೀವನ, ತನ್ನ ಪುಟ್ಟ ಮಗನಿಗಾಗಿ ಆಕೆ ಪಡುವ ಕಷ್ಟ ಇದನ್ನೆಲ್ಲ ಮನಮುಟ್ಟುವ ಹಾಗೆ ತೆರೆಮೇಲೆ ತೆರದಿಡುವ ಆ ಚಿತ್ರದ ಹೆಸರು ಬೀದಿ ಬದುಕು.
ನಟಿ ರೇಖಾ ಸಾಗರ್ (ರೇಖಾರಾಣಿ) ಈ ಚಿತ್ರದ ನಾಯಕಿಯಾಗಿದ್ದು, ಜೊತೆಗೆ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕಿಯೂ ಆಗಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ನಟಿ ರೇಖಾ ಸಾಗರ್, ನಿರ್ದೇಶಕ ಪುರುಷೋತ್ತಮ್, ಗಣೇಶರಾವ್ ಕೇಸರಕರ್, ರಾಜ್ ಭಾಸ್ಕರ್, ಸಂಕಲನಕಾರ ಅನಿಲ್, ಮಾ.ಸಾಕೇತ್, ಡಾ.ರೂಪೇಶ್ ಹಾಜರಿದ್ದರು.
ಸಾಕಷ್ಟು ಸೀರಿಯಲ್ ಅಲ್ಲದೆ ಕೆಜಿಎಫ್‌ ಚಿತ್ರದ ಹಪ್ಪಳದ ಮಲ್ಲಮ್ಮನಾಗಿ ರೇಖಾಸಾಗರ್ ಜನಪ್ರಿಯರಾದವರು. ಕುಡುಕ ಗಂಡನ ಉಪಟಳದ ಮಧ್ಯೆ ತನ್ನ ಮಗನಿಗಾಗಿ ಆಕೆ ಏನೆಲ್ಲ ಕಷ್ಟಪಡುತ್ತಾಳೆ ಎಂಬುದೇ ಈ ಚಿತ್ರದ ಕಥಾಹಂದರ. ನಿಜವಾದ ಸ್ಲಂ, ಗುಡಿಸಲುಗಳು, ಸ್ಮಶಾನ ಹಾಗೂ ಆಸ್ಪತ್ರೆಯಲ್ಲಿ ಹೀಗೆ ಎಲ್ಲಾ ರಿಯಲ್ ಲೊಕೇಶನ್‌ಗಳಲ್ಲೇ 25 ದಿನಗಳ ಕಾಲ ಚಿತ್ರೀಕರಿಸಿದ್ದೇವೆ, ಅಲ್ಲದೇ ಇಡೀ ಚಿತ್ರವನ್ನ ಸಿಂಕ್ ಸೌಂಡ್‌ನಲ್ಲಿ ಮಾಡಿದ್ದೇವೆ. ಹೆತ್ತ ತಾಯಿಯೊಬ್ಬಳು ತನ್ನ ಮಗನಿಗಾಗಿ ಏನೆಲ್ಲ ಹೋರಾಟ ಮಾಡುತ್ತಾಳೆ, ಅವಮಾನ ಅನುಭವಿಸುತ್ತಾಳೆ, ಅದು ಯಾತಕ್ಕೋಸ್ಕರ ಎಂಬುದನ್ನ ಚಿತ್ರದಲ್ಲೇ ನೋಡಿ ಎಂದರು.

Leave a Reply

Your email address will not be published. Required fields are marked *

error: Content is protected !!