ಉದಯವಾಹಿನಿ, ಮಂಡ್ಯ: 60 ವರ್ಷಗಳಿಂದ ಸರ್ಕಾರಿ ಸ್ಮಶಾನವಾಗಿದ್ದ ಜಾಗವನ್ನು ಮುಸ್ಲಿಂ ಮಕಾನ್ ಮಾಡಿದ ಹಿನ್ನೆಲೆ ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸಿರುವ ಘಟನೆ ಮಂಡ್ಯದ ಹೊಸಬೂದನೂರು ಗ್ರಾಮದಲ್ಲಿ ನಡೆದಿದೆ.
ಮಂಡ್ಯದ ಹೊಸಬೂದನೂರು ಗ್ರಾಮದಲ್ಲಿ ಕಳೆದ 1963ರಿಂದ 2017ರವರೆಗೆ ಸರ್ವೇ ನಂಬರ್ 313ರಲ್ಲಿ 1 ಎಕರೆ 13 ಗುಂಟೆ ಜಾಗದಲ್ಲಿ ಹಿಂದೂಗಳಿಗಾಗಿ ಸ್ಮಶಾನ ಇತ್ತು. ಆದರೆ 2017ರ ಬಳಿಕ ವಕ್ಫ್ ಬೋರ್ಡ್ ಆಸ್ತಿ ಇದಾಗಿದ್ದು, ಈ ಜಾಗ ಇದೀಗ ಮುಸ್ಲಿಂ ಸಮುದಾಯದ ಮಕಾನ್ (ಸ್ಮಶಾನ) ಆಗಿದೆ.ವಿಶೇಷ ಅಂದ್ರೆ ಈ ಊರಿನಲ್ಲಿ ಒಂದೇ ಒಂದು ಮುಸ್ಲಿಂ ಸಮುದಾಯದವರ ಮನೆ ಇಲ್ಲ. ಹೀಗಿರುವಾಗ ಮುಸ್ಲಿಂ ಸಮುದಾಯಕ್ಕೆ ಹಿಂದೂ ಸ್ಮಶಾನವನ್ನು ಬಿಟ್ಟುಕೊಡಲಾಗಿದೆ. ಇದೀಗ ಈ ಊರಿನಲ್ಲಿ ಹಿಂದೂಗಳು ಸಾವನ್ನಪ್ಪಿದರೆ ಹೂಳಲು ಸ್ಮಶಾನ ಇಲ್ಲದಂತೆ ಆಗಿದೆ. ಈ ಬಗ್ಗೆ ಸಚಿವರಿಗೆ, ಜಿಲ್ಲಾಡಳಿತಕ್ಕೆ, ಶಾಸಕರಿಗೆ ಹೇಳಿದ ವೇಳೆ ಇರುವ ಜಾಗದಲ್ಲಿ 24 ಗುಂಟೆ ಜಾಗವನ್ನು ಹಿಂದೂಗಳ ಸ್ಮಶಾನಕ್ಕಾಗಿ ಬಿಟ್ಟುಕೊಡಲಾಗಿತ್ತು.
ಇದೀಗ ಮತ್ತೆ ಆ ಜಾಗದಲ್ಲಿ ಅಂತ್ಯ ಸಂಸ್ಕಾರಕ್ಕೆ ತಡೆ ಹಿಡಿಯಲಾಗಿದೆ. ಜೊತೆಗೆ ಗ್ರಾಮ ಪಂಚಾಯ್ತಿಯಿಂದ ಸ್ಮಶಾನ ಅಭಿವೃದ್ಧಿಗೆ ತಹಶೀಲ್ದಾರ್ ತಡೆ ನೀಡಿದ್ದಾರೆ. ಹೀಗಾಗಿ ಇದೀಗ ಹೊಸಬೂದನೂರು ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈಗ ಮುಸ್ಲಿಂ ಮಕಾನ್ ಮಾಡಿರುವ ಹಿಂದೂ ಸ್ಮಶಾನವನ್ನು ವಾಪಸ್ ಹಿಂದೂಗಳಿಗೆ ನೀಡಬೇಕೆಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!