ಉದಯವಾಹಿನಿ : ಈರುಳ್ಳಿ ಹಾಕಿದ್ರೆ ಅಡುಗೆಯ ರುಚಿ ಮತ್ತಷ್ಟು ಹೆಚ್ಚುತ್ತದೆ. ಹಾಗಾಗಿ ಪ್ರತಿ ಅಡುಗೆಯಲ್ಲೂ ಈರುಳ್ಳಿಯನ್ನು ಬಳಕೆ ಮಾಡಲಾಗುತ್ತದೆ. ಆದ್ರೆ ಕಣ್ಣಲ್ಲಿ ನೀರು ಬರುವ ಕಾರಣ, ಕಿರಿಕಿರಿ ಉಂಟಾಗುವ ಕಾರಣ ಈರುಳ್ಳಿಯನ್ನು ಕತ್ತರಿಸುವುದೇ ಹಲವರಿಗೆ ತುಂಬಾನೇ ಕಷ್ಟದ ಕೆಲಸವಾಗಿಬಿಟ್ಟಿದೆ. ಈರುಳ್ಳಿ ಹೆಚ್ಚುವಾಗ ಕಣ್ಣಲ್ಲಿ ನೀರು ಬರಲು ಅದರಲ್ಲಿರುವ ಸಲ್ಫರ್‌ ಸಂಯುಕ್ತಗಳು ಕಾರಣ. ಹೌದು ಈರುಳ್ಳಿ ಕಟ್‌ ಮಾಡುವಾಗ ಸಲ್ಫರ್‌ ಸಂಯುಕ್ತಗಳು ಗಾಳಿಯಲ್ಲಿ ಬಿಡುಗಡೆಯಾಗಿ ಕಣ್ಣುಗಳಲ್ಲಿನ ತೇವಾಂಶದೊಂದಿಗೆ ಸೇರಿಕೊಂಡು ಕಿರಿಕಿರಿ ಮತ್ತು ಕಣ್ಣೀರನ್ನು ಉಂಟುಮಾಡುತ್ತದೆ. ಹೀಗಿರುವಾಗ ಈ ಒಂದಷ್ಟು ತಂತ್ರಗಳನ್ನು ಪಾಲಿಸುವ ಮೂಲಕ ಯಾವುದೇ ಕಿರಿಕಿರಿ, ಕಣ್ಣಿನ ಉರಿ ಇಲ್ಲದೆ ಆರಾಮದಾಯಕವಾಗಿ ಈರುಳ್ಳಿ ಕತ್ತರಿಸಬಹುದು.
ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರಬಾರದೆಂದರೆ ಅವುಗಳನ್ನು ಸಿಪ್ಪೆ ತೆಗೆದು ಕತ್ತರಿಸುವ ಅರ್ಧ ಗಂಟೆ ಮೊದಲು ನೀರಿನಲ್ಲಿ ನೆನೆಸಿಡಿ. ನೀವು ಹೀಗೆ ಮಾಡುವುದರಿಂದ, ಈರುಳ್ಳಿಯಲ್ಲಿರುವ ಅನಿಲಗಳು ನೀರಿನೊಂದಿಗೆ ಚೆನ್ನಾಗಿ ಬೆರೆತು ನಿಮ್ಮ ಕಣ್ಣುಗಳಲ್ಲಿ ನೀರು ಬರದಂತೆ ತಡೆಯುತ್ತದೆ. ಈರುಳ್ಳಿಯನ್ನು ಫ್ರಿಡ್ಜ್‌ನಲ್ಲಿಡಿ: ನೀವು ಬಯಸಿದರೆ, ಕತ್ತರಿಸುವ ಮೊದಲು ಈರುಳ್ಳಿಯನ್ನು 10 ನಿಮಿಷಗಳ ಕಾಲ ರೆಫ್ರಿಜರೇಟರ್‌ನಲ್ಲಿ ಇಡಬಹುದು. ಹೀಗೆ ಈರುಳ್ಳಿಯನ್ನು ತಂಪಾಗಿಸುವುದರಿಂದ ಸಲ್ಫರ್ ಸಂಯುಕ್ತಗಳ ಪರಿಣಾಮವನ್ನು ಕಡಿಮೆಯಾಗುತ್ತದೆ ಮತ್ತು ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುವುದಿಲ್ಲ.
ಫ್ಯಾನ್ ಆನ್‌ ಮಾಡಿ ಈರುಳ್ಳಿ ಕತ್ತರಿಸಲು ಪ್ರಯತ್ನಿಸಿ. ಏಕೆಂದರೆ ಗಾಳಿಯ ಹರಿವು ಸಲ್ಫರ್ ಸಂಯುಕ್ತಗಳು ಕಣ್ಣುಗಳನ್ನು ತಲುಪುವುದನ್ನು ತಡೆಯುತ್ತದೆ.ಚಾಕುವಿನ ಮೇಲೆ ನಿಂಬೆ ರಸವನ್ನು ಹಚ್ಚಿ: ಈರುಳ್ಳಿ ಕ್ತರಿಸುವಾಗ ಕಣ್ಣುಗಳಲ್ಲಿ ನೀರು ಬರುವುದನ್ನು ತಡೆಯಲು ಒಂದು ಉತ್ತಮ ಮಾರ್ಗವೆಂದರೆ ಈರುಳ್ಳಿ ಕತ್ತರಿಸುವ ಮೊದಲು ಚಾಕುವಿಗೆ ನಿಂಬೆ ರಸವನ್ನು ಹಚ್ಚುವುದು. ಇದು ತುಂಬಾ ಪ್ರಯೋಜನಕಾರಿಯಾಗಿದೆ.

Leave a Reply

Your email address will not be published. Required fields are marked *

error: Content is protected !!