
ಉದಯವಾಹಿನಿ, ನವದೆಹಲಿ: ಗಾಜಾದಲ್ಲಿ ಇಸ್ರೇಲ್-ಹಮಾಸ್ ನಡುವಿನ ಯುದ್ಧ ಕೊನೆಗೊಳಿಸುವ ಗುರಿಯನ್ನು ಹೊಂದಿರುವ ಈಜಿಪ್ಟ್‌ನಲ್ಲಿ ನಡೆದ ಶಾಂತಿ ಶೃಂಗಸಭೆ ಕೆಲ ವಿಭಿನ್ನ ಸನ್ನಿವೇಶಗಳಿಗೆ ವೇದಿಕೆಯಾಗಿದ್ದು, ಟರ್ಕಿ ಅಧ್ಯಕ್ಷ ಟಯ್ಯೀಪ್ ಎರ್ಡೋಗನ್ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವಿನ ಸ್ವಾರಸ್ಯಕರ ಸಂಭಾಷಣೆ ಇದೀಗ ಇಂಟರ್ನೆಟ್ ನಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಟರ್ಕಿಶ್ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರ ತಂಬಾಕು ವಿರೋಧಿ ಹೋರಾಟ ಇದೀಗ ಈಜಿಪ್ಟ್ ನ ಶಾಂತಿ ಶೃಂಗಸಭೆಯನ್ನು ತಲುಪಿದ್ದು, ಇಟಲಿ ಪ್ರಧಾನಿ ಮೆಲೋನಿ ಮೂಲಕ ಎರ್ಡೋಗನ್ ರ ತಂಬಾಕು ವಿರೋಧಿ ಹೋರಾಟ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.ಗಾಜಾದಲ್ಲಿ ಎರಡು ವರ್ಷಗಳ ಕಾಲ ನಡೆದ ಹಿಂಸಾಚಾರ ಮತ್ತು ಯುದ್ಧವನ್ನು ಕೊನೆಗೊಳಿಸುವಲ್ಲಿ ಮತ್ತು ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಯಲ್ಲಿ ಪ್ರಮುಖ ಪ್ರಗತಿ ಕಂಡ ಹಿನ್ನೆಲೆಯಲ್ಲಿ ಸೋಮವಾರ ನಡೆದ ಗಾಜಾ ಶಾಂತಿ ಶೃಂಗಸಭೆಗಾಗಿ ಹಲವಾರು ವಿಶ್ವ ನಾಯಕರು ಈಜಿಪ್ಟ್‌ನಲ್ಲಿ ಒಟ್ಟುಗೂಡಿದರು.ಈ ಶಾಂತಿ ಶೃಂಗಸಭೆಯಲ್ಲಿ ಜಾರ್ಜಿಯಾ ಮೆಲೋನಿ ಅವರನ್ನು ಭೇಟಿ ಮಾಡಿದ ಎರ್ಡೊಗನ್ ಅವರ ಕೈ ಕುಲುಕುತ್ತಾ ಧೂಮಪಾನವನ್ನು ನಿಲ್ಲಿಸಲು ಮನವೊಲಿಸಲು ಯತ್ನಿಸಿದರು. ಈ ವೇಳೆ ಅವರ ಪ್ರಶ್ನೆಗೆ ನಕ್ಕ ಮೆಲೋನಿ ಅದು ಅಸಾಧ್ಯ.. ನಾನು ಯಾರನ್ನೂ ಕೊಲ್ಲಲು ಬಯಸುವುದಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಶೃಂಗಸಭೆಯಲ್ಲಿ ಜಾರ್ಜಿಯಾ ಮೆಲೋನಿ ಅವರನ್ನು ಭೇಟಿ ಮಾಡಿದ ಎರ್ಡೋಗನ್ ಆತ್ಮೀಯವಾಗಿ ಉಭಯ ಕುಶಲೋಪರಿ ವಿಚಾರಿಸಿದರು. ಬಳಿಕ ಎರ್ಡೊಗನ್ ಮೆಲೋನಿ ಅವರ ಧೂಮಪಾನ ಅಭ್ಯಾಸದ ಕುರಿತು ಮಾತನಾಡಿದರು. ಮೆಲೋನಿ ಅವರಿಗೆ ‘ನೀವು ತುಂಬಾ ಚೆನ್ನಾಗಿ ಕಾಣುತ್ತೀರಿ. ಆದರೆ ನಾನು ನಿಮ್ಮನ್ನು ಧೂಮಪಾನವನ್ನು ನಿಲ್ಲಿಸುವಂತೆ ಮಾಡಬೇಕು’ ಎಂದು ಎರ್ಡೋಗನ್ ಹೇಳಿದರು.
