ಉದಯವಾಹಿನಿ, ಕೀವ್: ರಷ್ಯಾವು ಕಳೆದ ಮೂರು ತಿಂಗಳಿನಿಂದ ಉಕ್ರೇನ್‌ನ ರೈಲು ಜಾಲವನ್ನೇ ಗುರಿಯಾಗಿಸಿ ದಾಳಿ ನಡೆಸುತ್ತಿದೆ. ತನ್ನ ಬಳಿ ಇರುವ ಉತ್ಕೃಷ್ಟ ಮಟ್ಟದ ಡೋನ್‌ಗಳಿಂದ ಅದು ದಾಳಿಯನ್ನು ತೀವ್ರವಾಗಿಸಿದೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ. 2022ರ ಆರಂಭದಲ್ಲಿ ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ಪ್ರತಿ ವಾರ ಕನಿಷ್ಠ ಒಂದು ರೈಲಿನ ಮೇಲೆ ದಾಳಿ ನಡೆದಿದೆ. ಆದರೀಗ ಒಂದು ವಾರದಲ್ಲಿ 2ರಿಂದ 3 ಬಾರಿ ರೈಲುಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ವರದಿಯಾಗಿದೆ.
ರಷ್ಯಾವು ಹೊಸ ಡೋನ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇವು ಸುಮಾರು 200 ಕಿ.ಮೀ. ದೂರದವರೆಗೆ ಹಾರುವ ಸಾಮರ್ಥ್ಯ ಹೊಂದಿವೆ.
ವಾಣಿಜ್ಯ ಮತ್ತು ಮಿಲಿಟರಿ ಸರಕು ಸಾಗಣೆ ರೈಲುಗಳ ಮೇಲೆ ದಾಳಿ ನಡೆಸಲಾಗುತ್ತಿದೆ.
‘ಗಡಿಯಲ್ಲಿ ರೈಲುಗಳ ಮೇಲಿನ ದಾಳಿಯಿಂದ ಉಕ್ರೇನ್ ಜನರಿಗೆ ರೈಲು ಸಂಪರ್ಕವನ್ನು ರಷ್ಯಾ ಕಸಿದುಕೊಳ್ಳುತ್ತಿದೆ’ ಎಂದು ಉಕ್ರೇನ್‌ನ ರೈಲ್ವೆ ಇಲಾಖೆಯ ಸಿಇಒ ಒಲೆಕ್ಸಾಂದರ್ ಪರ್ಟ್‌ಸೋವಸ್ಕಿ ಹೇಳಿದರು. ರಷ್ಯಾದ ಪುನರಾವರ್ತಿತ ದಾಳಿಗಳ ಹೊರತಾಗಿಯೂ ಶೀಘ್ರ ಚೇತರಿಕೆ ಮೂಲಕ ಉಕ್ರೇನ್‌ನ ರೈಲುಗಳ ಓಡಾಟದಲ್ಲಿ ತೊಂದರೆಯಾಗದಂತೆ ಕೆಲಸ ನಿರ್ವಹಿಸಸಲಾಗುತ್ತಿದೆ. ಆದರೆ, ರಷ್ಯಾದ ಡೋನ್‌ಗಳ ಸಾಮರ್ಥ್ಯ ಇನ್ನಷ್ಟು ಸುಧಾರಿಸಿರುವುದು ಹಾಗೂ ದಾಳಿಯ ವೇಗ ಹೆಚ್ಚಾಗಿರುವುದು ಬೆದರಿಕೆಯನ್ನು ಒಡ್ಡಿದೆ ಎಂದು ಅವರು ಹೇಳಿದ್ದಾರೆ.
