ಉದಯವಾಹಿನಿ, ಹೋಟೆಲ್‌ಗೆ ಹೋದಾಗ ಬಹಳಷ್ಟು ಜನ ರೋಟಿ-ಕರಿ ಇಷ್ಟಪಟ್ಟು ತಿನ್ನುತ್ತಾರೆ. ಅದರಲ್ಲೂ ಅನೇಕರು ಬಟರ್ ನಾನ್ ರೋಟಿ ತಿನ್ನುವುದೇ ಹೆಚ್ಚು. ಬಟರ್ ನಾನ್ ರೋಟಿ ಜೊತೆ ಚಿಕನ್ ಕರಿ, ಪನೀರ್ ಅಥವಾ ಮಶ್ರೂಮ್ ಗ್ರೇವಿ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಮನೆಯಲ್ಲೇ ಬಟರ್ ನಾನ್ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ತಡ ಯಾಕೆ? ನೀವೂ ಒಂದ್ಸಲ ನಿಮ್ಮ ಮನೆಯಲ್ಲಿ ಇದನ್ನು ಮಾಡಿ ನೋಡಿ.

ಬೇಕಾಗುವ ಸಾಮಗ್ರಿಗಳು:
ಮೈದಾ- ಒಂದೂವರೆ ಕಪ್
ಮೊಸರು- ಕಾಲು ಕಪ್
ಅಡುಗೆ ಸೋಡಾ- ಅರ್ಧ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಸಕ್ಕರೆ- ಅರ್ಧ ಚಮಚ
ನೀರು- ಅಗತ್ಯಕ್ಕೆ ತಕ್ಕಂತೆ
ಬೆಣ್ಣೆ – ಕಾಲು ಕಪ್
ಎಳ್ಳು- 3 ಚಮಚ
ಕೊತ್ತಂಬರಿ ಸೊಪ್ಪು- ಸ್ವಲ್ಪ
ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಗೆ ಮೈದಾ ಹಿಟ್ಟು, ಮೊಸರು, ಬೇಕಿಂಗ್ ಸೋಡಾ, ಉಪ್ಪು, ಸಕ್ಕರೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಅಗತ್ಯವಿದ್ದಷ್ಟು ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಇದನ್ನು ಚೆನ್ನಾಗಿ 5 ನಿಮಿಷಗಳ ಕಾಲ ಕಲಸಬೇಕು. ನಂತರ ಇದನ್ನು ಒಂದು ಒದ್ದೆ ಬಟ್ಟೆಯಿಂದ ಮುಚ್ಚಿಟ್ಟು ಎರಡು ಗಂಟೆಗಳ ಕಾಲ ಹಾಗೆಯೇ ಬಿಡಬೇಕು.
* ಎರಡು ಗಂಟೆಯ ನಂತರ ಮತ್ತೆ ಚೆನ್ನಾಗಿ ಕೈಯಿಂದಲೇ ಕಲಸಬೇಕು. ನಂತರ ಒಂದು ಸ್ವಲ್ಪ ದೊಡ್ಡ ಉಂಡೆಯನ್ನು ತೆಗೆದುಕೊಂಡು ಸ್ವಲ್ಪ ಮೈದಾ ಪುಡಿ ಹಾಕಿ ಚಪಾತಿ ಲಟ್ಟಣಿಗೆಯಲ್ಲಿ ಲಟ್ಟಿಸಬೇಕು. ಮೊಟ್ಟೆ ಆಕಾರ ಅಥವಾ ತ್ರಿಭುಜಾಕಾರದಲ್ಲಿ ಲಟ್ಟಿಸಬಹುದು. ಲಟ್ಟಿಸಿದ ನಂತರ ಅದರ ಮೇಲೆ ಸ್ವಲ್ಪ ಕಪ್ಪು ಎಳ್ಳು ಹಾಗೂ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಮತ್ತೆ ನಿಧಾನವಾಗಿ ಲಟ್ಟಿಸಿ.
* ಹಿಟ್ಟಿನ ಹಿಂಬದಿಗೆ ನೀರು ಅದ್ದಿ. ನಂತರ ತವಾ ಬಿಸಿಯಾಗಲು ಇಡಿ. ತವಾ ಚೆನ್ನಾಗಿ ಬಿಸಿಯಾದಾಗ ತವಾಗೆ ಹಾಕಿ. ನೀರು ಇರುವ ಬದಿಯನ್ನು ಕೆಳಭಾಗಕ್ಕೆ ಹಾಕಬೇಕು. ಉರಿಯನ್ನು ಮಧ್ಯಮ ಪ್ರಮಾಣದಲ್ಲಿಟ್ಟು ಎರಡೂ ಬದಿ ಬೇಯಿಸಿಕೊಳ್ಳಬೇಕು.
* ಈಗ ಈ ನಾನ್ ರೋಟಿ ಮೇಲೆ ಬೆಣ್ಣೆಯನ್ನು ಹಚ್ಚಿ. ಈಗ ರುಚಿಕರವಾದ ಬಟರ್ ನಾನ್ ರೋಟಿ ಸವಿಯಲು ಸಿದ್ಧ.

Leave a Reply

Your email address will not be published. Required fields are marked *

error: Content is protected !!