ಉದಯವಾಹಿನಿ, ಪರಿಸರಕ್ಕೆ ದೊಡ್ಡ ಶತ್ರು ಆಗಿರುವ ಪ್ಲಾಸ್ಟಿಕ್ ಅನ್ನು ನಾವು-ನೀವೆಲ್ಲಾ ಬೇಕಾಬಿಟ್ಟಿ ಬಳಸಿ ಪರಿಸರವನ್ನು ಹಾಳುಗೆಡುಗುತ್ತಿದ್ದೇವೆ. ಪ್ಲಾಸ್ಟಿಕ್ ಖಂಡಿತ ನಮಗೆಲ್ಲಾ ಅನಿವಾರ್ಯತೆ ಅಲ್ಲ, ಆದರೂ ಇದರ ಬಳಕೆ ಮಾತ್ರ ನಿಂತಿಲ್ಲ. ಸರ್ಕಾರದ ನೀತಿ-ನಿಯಮ ಯೋಜನಗೆಳನ್ನು ಗಾಳಿಗೆ ತೂರಿ, ಪ್ಲಾಸ್ಟಿಕ್ ಅನ್ನು ಪ್ರತಿಯೊಂದಕ್ಕೂ ಬಳಸುತ್ತಿದ್ದೇವೆ. ಪರಿಸರ ರಕ್ಷಣೆ ಬರೀ ಬಾಯಿ ಮಾತಿಗಾಗದೇ, ಪ್ಲಾಸ್ಟಿಕ್‌ಗೆ ತಿಲಾಂಜಲಿ ಇಡಲು ಪರ್ಯಾಯ ವಸ್ತುಗಳ ಬಳಕೆಯಾಗಬೇಕು. ಅದೆಷ್ಟೋ ವಿಜ್ಞಾನಿಗಳು, ಸಂಸ್ಥೆಗಳು ಪ್ರತಿನಿತ್ಯ ಪ್ಲಾಸ್ಟಿಕ್‌ಗೆ ಪರ್ಯಾಯವಾದ ವಸ್ತುಗಳ ಅಭಿವೃದ್ಧಿಯಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೂ ಅಂತಹದ್ದೇ ಒಂದು ವಸ್ತುವಿನ ಅಭಿವೃದ್ಧಿಯಾಗಿದೆ.
ಚೀನಾದ ಸಂಶೋಧಕರು ಪ್ಲಾಸ್ಟಿಕ್ ಎಂಬ ಪೆಡಂಭೂತಕ್ಕೆ ಪರ್ಯಾಯವಾಗಿ ಬಿದಿರಿನ ಮೊರೆ ಹೋಗಿದ್ದಾರೆ. ಈ ಸಸ್ಯವನ್ನು ಪ್ಲಾಸ್ಟಿಕ್ ಆಗಿ ಪರಿವರ್ತಿಸುವ ಮಾರ್ಗವನ್ನು ಕಂಡುಕೊಂಡಿದ್ದಾರೆ. ಪ್ಲಾಸ್ಟಿಕ್ ಬದಲಿಗೆ ಈಗಾಗ್ಲೇ ಹಗುರವಾದ, ಹೊಂದಿಕೊಳ್ಳುವ ಅನೇಕ ಜೈವಿಕ ವಿಘಟನೀಯ ವಸ್ತುಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ ಇವು ಬಾಳಿಕೆ ಬರುತ್ತವೆ ಅನ್ನೋದಕ್ಕೆ ಯಾವುದೇ ಗ್ಯಾರೆಂಟಿ ಇಲ್ಲ. ಆದ್ದರಿಂದ ಬಾಳಿಕೆ ಬರುವ ಅಥವಾ ಗಟ್ಟಿಮುಟ್ಟಾದ ಪ್ಲಾಸ್ಟಿಕ್ ಬದಲಿ ಆಯ್ಕೆಯಾಗಿ ಬಿದಿರಿನ ಪರ್ಯಾಯ ವಿನ್ಯಾಸಗೊಳಿಸಲಾಗಿದೆ.
ಬಿದಿರಿನ ಸೆಲ್ಯುಲೋಸ್‌ನಿಂದ ಪ್ಲಾಸ್ಟಿಕ್ : ಚೀನಾದ ದೂರದ ಈಶಾನ್ಯದಲ್ಲಿರುವ ಶೆನ್ಯಾಂಗ್ ರಾಸಾಯನಿಕ ತಂತ್ರಜ್ಞಾನ ವಿಶ್ವವಿದ್ಯಾಲಯದ ದಾವೇ ಝಾವೊ ಮತ್ತು ಅವರ ಸಹೋದ್ಯೋಗಿಗಳು ಬಿದಿರಿನ ಸೆಲ್ಯುಲೋಸ್‌ನಿಂದ ಪ್ಲಾಸ್ಟಿಕ್ ಉತ್ಪಾದಿಸುವ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ
ಈ ಸಸ್ಯವನ್ನು ಬಾಳಿಕೆ ಬರುವ, ಮಣ್ಣಿನಲ್ಲಿ ಸುಲಭವಾಗಿ ಕರಗುವ ಪ್ಲಾಸ್ಟಿಕ್ ಆಗಿ ಪರಿವರ್ತಿಸುವ ವಿಧಾನವನ್ನು ಅಭಿವೃದ್ಧಿಪಡಿಸುವ ಮೂಲಕ ಬಿದಿರಿನಿಂದ ತಯಾರಿಸಿದ ಜೈವಿಕ ವಿಘಟನೀಯ ಪ್ಲಾಸ್ಟಿಕ್ ಅನ್ನು ಕಂಡು ಹಿಡಿದಿದ್ದಾರೆ.
