ಉದಯವಾಹಿನಿ, ನವದೆಹಲಿ: ಖ್ಯಾತ ಗಾಯಕ ಜುಬೀನ್ ಗಾರ್ಗ್ ನಿಗೂಢ ಸಾವಿನ ಒಂದು ತಿಂಗಳ ಬಳಿಕ ಸಿಂಗಾಪುರದ ಪೊಲೀಸರು, “ಅಪರಾಧ ನಡೆದಿರುವ ಬಗ್ಗೆ ಇಲ್ಲಿಯವರೆಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ,” ಎಂದು ತಿಳಿಸಿದ್ದಾರೆ. ಸುಖಾ ಸುಮ್ಮನೆ ಖ್ಯಾತ ಗಾಯಕನ ಸಾವಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೂಹ ಮತ್ತು ಸುಳ್ಳು ಮಾಹಿತಿಯನ್ನು ಹರಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಈಶಾನ್ಯ ಉತ್ಸವದಲ್ಲಿ ಪ್ರದರ್ಶನ ನೀಡಲು ಸಿಂಗಾಪೂರಕ್ಕೆ ತೆರಳಿದ್ದ ಸಂದರ್ಭ, ಸ್ಕೂಬಾ ಡೈವಿಂಗ್‌ಗೆ ವೇಳೆ ಸಮುದ್ರದಲ್ಲಿ ಮುಳುಗಿ ಗಾರ್ಗ್‌ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಘಟನೆಯಿಂದ ಭಾರತ, ವಿಶೇಷವಾಗಿ ಅವರ ಹುಟ್ಟೂರು ಅಸ್ಸಾಂನಲ್ಲಿ ಶೋಕದ ಛಾಯೆ ಆವರಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಈವೆಂಟ್ ಆಯೋಜಕ ಶ್ಯಾಮ್‌ಕನು ಮಹಂತ, ಮ್ಯಾನೇಜರ್ ಸಿದ್ಧಾರ್ಥ್ ಶರ್ಮಾ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಅಲ್ಲದೇ ಎಪಿಎಸ್ ಅಧಿಕಾರಿ ಸಂದೀಪನ್ ಗಾರ್ಗ್ ಮತ್ತು ನಂದೇಶ್ವರ ಬೋರಾ ಸೇರಿದಂತೆ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಈ ಪ್ರಕರಣವನ್ನು ಸಿಂಗಾಪುರದ ಕೊರೋನರ್ಸ್ ಆ್ಯಕ್ಟ್ ಅಡಿಯಲ್ಲಿ ತನಿಖೆ ನಡೆಸಲಾಗುತ್ತಿದ್ದು, ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಅಪರಾಧ ನಡೆದ ಬಗ್ಗೆ ಸಾಕ್ಷ್ಯ ಸಿಕ್ಕಿಲ್ಲ” ಪೊಲೀಸರು ತಿಳಿಸಿದ್ದಾರೆ. ಅಲ್ಲದೆ “ಎಸ್‌ಪಿಎಫ್ ಈ ಪ್ರಕರಣವನ್ನು ಸಮಗ್ರ ಹಾಗೂ ವೃತ್ತಿಪರ ರೀತಿಯಲ್ಲಿ ತನಿಖೆ ನಡೆಸಲು ಬದ್ಧವಾಗಿದ್ದು, ಇದಕ್ಕೆ ಸಮಯದ ಅವಶ್ಯಕತೆ ಇದೆ. ದಯವಿಟ್ಟು ತನಿಖೆ ಮುಗಿಯುವವರೆಗೂ ಊಹಾಪೂಹ ಅಥವಾ ವದಂತಿಗಳನ್ನು ಜನರು ನಂಬಬಾರದು ಮತ್ತು ಶಾಂತಿ ಕಾಪಾಡಬೇಕು” ಎಂದು ಮನವಿ ಮಾಡಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!