ಉದಯವಾಹಿನಿ, ತ್ರಿಶೂರ್(ಕೇರಳಂ): ಸಿಪಿಐನಿಂದ ಉಚ್ಚಾಟನೆಗೊಂಡಿದ್ದ ಶಾಸಕ ಸಿ.ಸಿ.ಮುಕುಂದನ್ ಅವರು ಇಂದು (ಸೋಮವಾರ) ತ್ರಿಶೂರ್‌ನ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಸೇರಿದ್ದಾರೆ. ರಾಜ್ಯ ಬಿಜೆಪಿ ಹಿರಿಯ ನಾಯಕರಾದ ಎ.ಎನ್.ರಾಧಾಕೃಷ್ಣನ್ ಮತ್ತು ಬಿ.ಗೋಪಾಲಕೃಷ್ಣನ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಟ್ಟಿಕಾ ಕ್ಷೇತ್ರದಿಂದ ಟಿಕೆಟ್ ಸಿಗದ ಅಸಮಾಧಾನ: ಮುಂಬರುವ ವಿಧಾನಸಭಾ ಚುನಾವಣೆಗೆ ಎಸ್‌ಸಿ-ಮೀಸಲಾತಿ ನಟ್ಟಿಕಾ ಕ್ಷೇತ್ರಕ್ಕೆ ತಮ್ಮನ್ನು ಮತ್ತೆ ಪರಿಗಣಿಸದೇ ಇದ್ದುದಕ್ಕೆ ಮುಕುಂದನ್ ಅವರು ಸಿಪಿಐ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಾದ ನಂತರ ಅವರನ್ನು ಉಚ್ಚಾಟಿಸಲಾಗಿತ್ತು.
ವಿಫಲವಾದ ಕಾಂಗ್ರೆಸ್ ಸೇರುವ ಪ್ರಯತ್ನ: ಆ ಬಳಿಕ ಕಾಂಗ್ರೆಸ್ ಪಕ್ಷ ಸೇರಲು ಸಾಕಷ್ಟು ಕಸರತ್ತು ಮಾಡಿದ್ದರು. ರಾಜ್ಯ ನಾಯಕರೊಂದಿಗೆ ಮಾತುಕತೆ ನಡೆಸಿದ್ದರು. ನವದೆಹಲಿಗೆ ತೆರಳಿ ಕೈ ನಾಯಕರನ್ನು ಭೇಟಿ ಕೂಡಾ ಮಾಡಿದ್ದರು. ಆದರೆ, ಈ ಪ್ರಯತ್ನಗಳು ಫಲ ನೀಡದ ಕಾರಣ, ಇದೀಗ ಬಿಜೆಪಿ ಸೇರಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿ ಎಸ್‌ಸಿ/ಎಸ್‌ಟಿ ಸಮುದಾಯಗಳ ಹಿತಾಸಕ್ತಿ ರಕ್ಷಣೆಗೆ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿರುವ ಪಕ್ಷ. ಬದಲಾವಣೆಯ ನಿರೀಕ್ಷೆಯೊಂದಿಗೆ ನಾನು ಪಕ್ಷ ಸೇರಿದ್ದೇನೆ. ಜನರ ಹಿತಾಸಕ್ತಿಗಳನ್ನು ರಕ್ಷಿಸುವುದು ಮತ್ತು ಅವರಿಗೆ ಒಳ್ಳೆಯ ಸೌಲಭ್ಯಗಳನ್ನು ಒದಗಿಸುವುದು ನನ್ನ ದೊಡ್ಡ ಆಸೆ. ಬಿಜೆಪಿಯಲ್ಲಿ ಪ್ರಾಮಾಣಿಕವಾಗಿ ಉಳಿಯುವ ಪ್ರತಿಜ್ಞೆ ಕೈಗೊಂಡಿದ್ದೇನೆ ಎಂದು ಪಕ್ಷ ಸೇರ್ಪಡೆಯ ಬಳಿಕ ಮುಕುಂದನ್ ಹೇಳಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸುವುದಾಗಿಯೂ ಮುಕುಂದನ್ ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ತಾವು ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿರುವುದನ್ನು ಒಪ್ಪಿಕೊಂಡಿದ್ದು, ಆ ನಡೆ ಏಕೆ ಫಲ ನೀಡಲಿಲ್ಲ ಎಂದು ತಿಳಿದಿಲ್ಲ ಎಂದರು.
ಮಾಜಿ ಶಾಸಕಿ ಗೀತಾ ಗೋಪಿ ಅವರನ್ನು ನಾಟಿಕಾ ಕ್ಷೇತ್ರಕ್ಕೆ ಸಿಪಿಐ ಆಯ್ಕೆ ಮಾಡಿದೆ. ಈ ಕ್ಷೇತ್ರದಿಂದ ಸ್ಪರ್ಧಿಸಲು ತಮಗೆ ಮತ್ತೊಮ್ಮೆ ಅವಕಾಶ ನೀಡದ ಪಕ್ಷದ ನಡೆಯಿಂದ ಬೇಸರಗೊಂಡಿದ್ದ ಮುಕುಂದನ್ ಪಕ್ಷದ ನಾಯಕತ್ವವನ್ನು ಟೀಕಿಸಿದ್ದರು. ಇದಾದ ನಂತರ ಮುಕುಂದನ್ ಅವರನ್ನು ಉಚ್ಛಾಟಿಸಲಾಗಿತ್ತು.
