ಉದಯವಾಹಿನಿ, ಮೇದಕ್ (ತೆಲಂಗಾಣ): ಮೇದಕ್ ಜಿಲ್ಲೆಯ ಹವೇಲಿ ಘನಪುರ ತಾಲೂಕಿನ ಲಿಮ್ಸಾನ್‌ಪಲ್ಲಿ ಎಂಬಲ್ಲಿ ತಿಂಗಳ ಮಗುವನ್ನು 1.70 ಲಕ್ಷ ರೂ.ಗೆ ಮಾರಾಟ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮದ್ಯ ವ್ಯಸನಿ ತಂದೆ ಸೇರಿದಂತೆ ಆರು ಜನ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿ ತಂದೆಯು ಮಧ್ಯವರ್ತಿಗಳ ಸಹಾಯದಿಂದ ತನ್ನ ಒಂದು ತಿಂಗಳ ಮಗುವನ್ನು ಕಾಮರೆಡ್ಡಿ ಜಿಲ್ಲೆಯ ಮಕ್ಕಳಿಲ್ಲದ ದಂಪತಿಗೆ ಮಾರಾಟ ಮಾಡಿದ್ದ. ಆದರೆ, ಅಂಗನವಾಡಿ ಶಿಕ್ಷಕಿಗೆ ಬಂದ ಒಂದು ಸಣ್ಣ ಅನುಮಾನದಿಂದ ಈ ಘಟನೆ ಬಹಿರಂಗಗೊಂಡಿದೆ. ಪೊಲೀಸರು ಆರೋಪಿಯನ್ನು ಕರೆದು ವಿಚಾರಿಸಿದಾಗ ಅಸಲಿ ಕಥೆ ಗೊತ್ತಾಗಿದೆ.
ಚೌಕಾಸಿ ಮಾಡಿ ಮಾರಾಟ: ಮಗುವಿನ ತಂದೆ ಮದ್ಯ ವ್ಯಸನಿಯಾಗಿದ್ದು, ವರ್ಷದ ಹಿಂದೆಯಷ್ಟೇ ಎರಡನೇ ವಿವಾಹವಾಗಿದ್ದಾನೆ. ಫೆಬ್ರವರಿಯಲ್ಲಿ ಈತನ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಕುಡಿತದ ಚಟಕ್ಕೆ ಒಳಗಾಗಿ, ಆರ್ಥಿಕ ತೊಂದರೆ ಎದುರಿಸುತ್ತಿದ್ದ ತಂದೆ, ಮಗುವಿನ ಮಾರಾಟಕ್ಕೆ ಬಯಸಿದ್ದ. ಕಾಮರೆಡ್ಡಿ ಜಿಲ್ಲೆಯ ಮಕ್ಕಳಿಲ್ಲದ ದಂಪತಿಯೊಂದಿಗೆ ಇಬ್ಬರು ಮಧ್ಯವರ್ತಿಗಳ ಮೂಲಕ ಮಾತುಕತೆ ನಡೆಸಿದ್ದ. 5 ಲಕ್ಷ ರೂ.ಗೆ ಚೌಕಾಸಿ ಮಾಡಿ ಕೊನೆಗೆ 1.70 ಲಕ್ಷ ರೂ.ಗೆ ಒಪ್ಪಂದ ಪತ್ರ ಬರೆದು ಮಗುವನ್ನು ಮಾರಾಟ ಕೂಡ ಮಾಡಿದ್ದ. ಅಂಗನವಾಡಿ ಶಿಕ್ಷಕಿಗೆ ಬಂದ ಅನುಮಾನದಿಂದ ಈ ಘಟನೆ ಬಹಿರಂಗವಾಗಿದೆ ಎಂದು ಮೇದಕ್ ಡಿಎಸ್‌ಪಿ ಪ್ರಸನ್ನ ಕುಮಾರ್ ಮಾಹಿತಿ ನೀಡಿದ್ದಾರೆ.
ಸಣ್ಣ ಅನುಮಾನದಿಂದ ಘಟನೆ ಬಹಿರಂಗ: ಅಂಗನವಾಡಿ ಸಿಬ್ಬಂದಿಯಿಂದ ಈ ಘಟನೆ ಗೊತ್ತಾಗಿದೆ. ಸಾಮಾನ್ಯವಾಗಿ ಮೊಟ್ಟೆಗಳನ್ನು ಪಡೆಯಲು ತಾಯಂದಿರು ಅಂಗನವಾಡಿ ಕೇಂದ್ರಕ್ಕೆ ಬರುತ್ತಾರೆ. ಆದರೆ, ಈ ಮಗುವಿನ ತಾಯಿ ಮಾತ್ರ ಕೆಲವು ದಿನಗಳಿಂದ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಅಂಗನವಾಡಿ ಶಿಕ್ಷಕಿ ಅವರ ಮನೆಗೆ ಹೋದಾಗ, ಮನೆ ಬೀಗ ಹಾಕಿರುವುದನ್ನು ಕಂಡಿದ್ದಾರೆ. ಅವರು ತಕ್ಷಣ ಐಸಿಡಿಎಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ತನಿಖೆ ನಡೆಸಿದಾಗ, ತಂದೆ ಕಾಮರೆಡ್ಡಿ ಜಿಲ್ಲೆಯ ದಂಪತಿಗೆ ಮಗುವನ್ನು ಮಾರಾಟ ಮಾಡಿರುವುದು ಕಂಡುಬಂದಿದೆ. ಮಾಹಿತಿ ಪಡೆದ ಹವೇಲಿ ಘನಪುರ ಪೊಲೀಸರು, ತಕ್ಷಣ ಮಗುವಿನ ಸ್ಥಳವನ್ನು ಪತ್ತೆಹಚ್ಚಿ ಮಗುವನ್ನು ಅವರಿಂದ ಸುರಕ್ಷಿತವಾಗಿ ಕರೆತಂದಿದ್ದಾರೆ. ಸದ್ಯ ಮಗು ಮತ್ತು ತಾಯಿಯನ್ನು ಸಖಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
ಮಗುವನ್ನು ಮಾರಾಟ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಇಬ್ಬರು, ಮಗುವಿನ ತಂದೆ ಮತ್ತು ಖರೀದಿದಾರ ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅವರನ್ನು ರಿಮಾಂಡ್‌ಗೆ ಕಳುಹಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ರೀತಿ ಮಕ್ಕಳನ್ನು ಖರೀದಿಸುವುದು ಮತ್ತು ಮಾರಾಟ ಮಾಡುವುದು ಕಾನೂನಿನ ಪ್ರಕಾರ ಅಪರಾಧ. ಸದ್ಯ ಆರೋಪಿಗಳ ವಿರುದ್ಧ ನಾವು ಎಫ್‌ಐಆರ್ ದಾಖಲಿಸಿದ್ದೇವೆ. ಮಕ್ಕಳನ್ನು ಮಾರಾಟ ಮಾಡಿದವರು ಮತ್ತು ಖರೀದಿಸಿದವರು ಎಲ್ಲರೂ ಅಪರಾಧಿಗಳೇ. ಕೆಲವರು ಮಕ್ಕಳಿಲ್ಲದ ಕಾರಣ ಮಧ್ಯವರ್ತಿಗಳ ಮೂಲಕ ಮಕ್ಕಳನ್ನು ಖರೀದಿಸಲು ಹತಾಶರಾಗಿದ್ದಾರೆ. ಇದು ಅಪರಾಧ. ಈ ಘಟನೆಯಲ್ಲಿ ಭಾಗಿಯಾದ ಆರು ಜನರನ್ನು ನಾವು ಬಂಧಿಸಿದ್ದೇವೆ.
