ಉದಯವಾಹಿನಿ, ಶ್ರೀನಗರ: ಕಾಶ್ಮೀರದ ದಾಲ್ ಸರೋವರದ ದಡದಲ್ಲಿರುವ ಏಷ್ಯಾದ ಅತಿದೊಡ್ಡ ಟುಲಿಪ್ ಉದ್ಯಾನವನ ಇದೀಗ ಎಲ್ಲರಿಗೂ ಮುಕ್ತವಾಗಿದೆ. ಈ ಬಾರಿ ನಿಗದಿತ ಸಮಯಕ್ಕಿಂತ ಮುಂಚೆ ಹೂವುಗಳು ಅರಳಿರುವುದರಿಂದಾಗಿ 10 ದಿನ ಮೊದಲೇ ಉದ್ಯಾನವನ ಸಾರ್ವಜನಿಕರಿಗೆ ಪ್ರವೇಶ ಮುಕ್ತವಾಗಿದೆ. ಇಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಈ ಉದ್ಯಾನವನ್ನು ಉದ್ಘಾಟಿಸುವ ಮೂಲಕ ಪ್ರವಾಸಿಗರಿಗೆ ಮುಕ್ತಗೊಳಿಸಿದರು.

ಕಾಶ್ಮೀರದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ 2008ರಿಂದಲೇ ಸ್ಥಾನ ಪಡೆದಿರುವ ಈ ಉದ್ಯಾನವನವು ಸಾಮಾನ್ಯವಾಗಿ ಮಾರ್ಚ್​ ಕೊನೆಯ ವಾರದಲ್ಲಿ ಪ್ರವಾಸಿಗರಿಗೆ ಮುಕ್ತವಾಗುತ್ತಿತ್ತು. ಆದ್ರೆ ಕೆಲವು ದಶಕಗಳಿಂದಿಚೆಗೆ ಕಣಿವೆ ರಾಜ್ಯವು ಹೆಚ್ಚು ಬಿಸಿಲ ತಾಪಮಾನಕ್ಕೆ ಗುರಿಯಾಗುತ್ತಿದ್ದು, ಇದರಿಂದಾಗಿ ಟುಲಿಪ್​ಗಳು ಬೇಗನೆ ಅರಳಲು ಪ್ರಾರಂಭವಾಗಿವೆ. ಉದ್ಯಾನವನದಲ್ಲಿ ಸುಮಾರು 70ಕ್ಕೂ ಹೆಚ್ಚು ಬಗೆಯ ಟುಲಿಪ್​ಗಳನ್ನು ನೋಡಬಹುದಾಗಿದೆ. ಈ ಮನೋಹರ ದೃಶ್ಯವನ್ನು ಕಣ್ತುಂಬಿಕೊಳ್ಳಲು ತೋಟಗಾರಿಕೆ ಇಲಾಖೆ ಬಲ್ಬ್​ಗಳ ಸಾಂದ್ರತೆ ಹೆಚ್ಚಿಸಿದೆ. ಇದಕ್ಕಾಗಿ 1.8 ಮಿಲಿಯನ್‌ಗಿಂತಲೂ ಹೆಚ್ಚು ಬಲ್ಬ್‌ಗಳನ್ನು ನೆಡಲಾಗಿದೆ. ಉದ್ಘಾಟನಾ ದಿನದಂದು ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಮತ್ತು ಸ್ಥಳೀಯರು ಉದ್ಯಾನದ ಹೊರಗೆ ಮುಂಚಿತವಾಗಿ ಕಾಯುತ್ತಿದ್ದರು. ಇದರ ಜೊತೆಗೆ ಇದರ ಆಕರ್ಷಣೆಯನ್ನು ಹೆಚ್ಚಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಜೋಡಿಸಲಾಗಿದೆ. ಸಿಎಂ ಅಬ್ದುಲ್ಲಾ ಜೊತೆಗೆ ಸಚಿವ ಸಂಪುಟ ಸಹೋದ್ಯೋಗಿಗಳು ಮತ್ತು ನ್ಯಾಷನಲ್​ ಕಾನ್ಫರೆನ್ಸ್​ ಶಾಸಕರು ಕೂಡ ಇಂದಿರಾ ಗಾಂಧಿ ಮೆಮೋರಿಯಲ್​ ಗಾರ್ಡನ್​ಗೆ ಭೇಟಿ ನೀಡಿದರು.

ಈ ವೇಳೆ ಮಾತನಾಡಿದ ಸಿಎಂ ಓಮರ್​ ಅಬ್ದುಲ್ಲಾ, ಪ್ರವಾಸೋದ್ಯಮ ಉದ್ಯಮಕ್ಕೆ ಇದು ಹೊಸ ಆರಂಭ ನೀಡುತ್ತದೆ. ಪ್ರವಾಸೋದ್ಯವು ತುಂಬ ಸಂಕಷ್ಟದ ಸಮಯದಲ್ಲಿದ್ದು, ಈ ಪರಿಸ್ಥಿತಿ ಬದಲಾವಣೆ ತರಬಹುದು. ಹೊರಗಿನ ಜನರು ಕೂಡ ಜಮ್ಮು ಮತ್ತು ಕಾಶ್ಮೀರ ಸೌಂದರ್ಯ ಸವಿಯಲು ಅವರು ಆಗಮಿಸುತ್ತಾರೆ ಎಂಬ ಭರವಸೆ ಇದೆ ಎಂದರು.

Leave a Reply

Your email address will not be published. Required fields are marked *

error: Content is protected !!