ಉದಯವಾಹಿನಿ , ಪಟನಾ: ನಾಮಪತ್ರ ಸಲ್ಲಿಸುವ ಕೆಲವೇ ನಿಮಿಷಗಳ ಮೊದಲು ಬಂದ ಒಂದು ಫೋನ್ ಕರೆಯಿಂದಾಗಿ ಅಭ್ಯರ್ಥಿಯೊಬ್ಬ ಚುನಾವಣಾ ಕಣದಿಂದ ಹಿಂದೆ ಸರಿದಿರುವ ಘಟನೆ ನಡೆದಿದೆ. ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಅಶ್ವಿನಿ ಚೌಬೆ ಅವರ ಪುತ್ರ ಅರ್ಜಿತ್ ಶಾಶ್ವತ್ ಚೌಬೆ ಅವರು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಭಾಗಲ್ಪುರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಮಾಡಿದ್ದರು. ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಶನಿವಾರ ನಾಮಪತ್ರ ಸಲ್ಲಿಕೆಗೆ ಕೆಲವು ನಿಮಿಷಗಳ ಮೊದಲು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.
ನಾಮಪತ್ರ ಸಲ್ಲಿಸಲು ಶನಿವಾರ ಜಿಲ್ಲಾ ಕಲೆಕ್ಟರ್ ಕಚೇರಿಗೆ ಆಗಮಿಸಿದ್ದ ಅರ್ಜಿತ್ ಅವರಿಗೆ ಫೋನ್ ಕರೆಯೊಂದು ಬಂದಿದೆ. ಈ ವೇಳೆಯಲ್ಲಿ ಅವರ ಸುತ್ತಮುತ್ತ ಬೆಂಬಲಿಗರು ಮತ್ತು ಮಾಧ್ಯಮ ಪ್ರತಿನಿಧಿಗಳು ಇದ್ದರು. ಫೋನ್ ಕರೆಗೆ ಸಂಕ್ಷಿಪ್ತವಾಗಿ ಸ್ಪಂದಿಸಿದ ಅರ್ಜಿತ್, ಬಳಿಕ ನಾಮಪತ್ರ ಸಲ್ಲಿಕೆ ಮಾಡದೇ ಅಲ್ಲಿಂದ ಹಿಂದಕ್ಕೆ ಹೋದರು. ಇದು ಅವರ ಬೆಂಬಲಿಗರು ಮತ್ತು ಸೇರಿದ್ದ ಜನರಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು.ಅರ್ಜಿತ್ ಶಾಶ್ವತ್ ಚೌಬೆ ಅವರು ಹಠಾತ್ ಆಗಿ ಚುನಾವಣಾ ಕಣದಿಂದ ಹಿಂದೆ ಸರಿಯಲು ಕಾರಣವಾಗಿದ್ದಾದರೂ ಏನು ಎನ್ನುವ ಕುತೂಹಲ ಎಲ್ಲರಲ್ಲೂ ಇದ್ದುದರಿಂದ ಇದಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು ತಂದೆಯವರು ಫೋನ್ ಮಾಡಿದ್ದರು. ಇದು ನನ್ನ ಮನಸ್ಸನ್ನು ಬದಲಾಯಿಸಿತು ಎಂದು ತಿಳಿಸಿದ್ದಾರೆ.
ತಂದೆ ಕರೆ ಮಾಡಿ ನನಗೆ ನೀವು ಬಿಜೆಪಿಯಲ್ಲಿದ್ದೀರಿ ಮತ್ತು ಬಿಜೆಪಿಯಲ್ಲಿಯೇ ಉಳಿಯುತ್ತೀರಿ ಎಂದು ಹೇಳಿದರು. ಅವರ ನಿರ್ದೇಶನವನ್ನು ಗೌರವಿಸಿ ಪಕ್ಷದ ವಿರುದ್ಧ ದಂಗೆ ಏಳದಿರಲು ನಿರ್ಧರಿಸಿದ್ದೇನೆ. ಹೀಗಾಗಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದೇನೆ ಎಂದು ತಿಳಿಸಿದರು. ಭಾಗಲ್ಪುರಕ್ಕೆ ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ ಬಳಿಕ ಚೌಬೆ ಅವರು ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಣಯವನ್ನು ಕೈಗೊಂಡಿದ್ದರು. ಇವರಿಗೆ ಬಿಜೆಪಿಯ ಉನ್ನತ ನಾಯಕರು ತೀವ್ರ ಒತ್ತಡವನ್ನು ಹೇರಿದ್ದರು. ಪಕ್ಷವು ಇಲ್ಲಿ ಮತ್ತೊಮ್ಮೆ ರೋಹಿತ್ ಪಾಂಡೆಯನ್ನೇ ಅಭ್ಯರ್ಥಿಯಾಗಿ ಆಯ್ಕೆ ಮಾಡಿತ್ತು. ಇದು ಚೌಬೆಯವರಿಗೆ ಬೇಸರ ಉಂಟು ಮಾಡಿತ್ತು ಎನ್ನಲಾಗಿದೆ.
