ಉದಯವಾಹಿನಿ , ಭುವನೇಶ್ವರ: ಅಪ್ರಾಪ್ತ ಬಾಲಕಿಯೊಬ್ಬಳು ಒಂಟಿಯಾಗಿ ಮಧ್ಯರಾತ್ರಿ ರಕ್ತಸಿಕ್ತವಾಗಿ ಅರೆಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದು ದಾಖಲಾದ ಘಟನೆ ಒಡಿಶಾದಲ್ಲಿ ನಡೆದಿದೆ. ಆಕೆಯ ಮೇಲೆ ಅತ್ಯಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. 17 ವರ್ಷದ ಬಾಲಕಿ ರಕ್ತಸಿಕ್ತವಾಗಿ ಅರೆಪ್ರಜ್ಞಾವಸ್ಥೆಯಲ್ಲಿ ಕ್ಯಾಪಿಟಲ್ ಆಸ್ಪತ್ರೆಗೆ ಒಂಟಿಯಾಗಿ ನಡೆದುಕೊಂಡು ಬಂದಿದ್ದಾಳೆ. ಆಕೆಯ ಸ್ಥಿತಿಯನ್ನು ಕಂಡ ಕೂಡಲೇ ವೈದ್ಯರು ಚಿಕಿತ್ಸೆಗೆ ಮುಂದಾಗಿದ್ದಾರೆ ಹಾಗೂ ಈ ಕುರಿತು ಪೊಲೀಸರಿಗೆ ಮಾಹಿತಿಯನ್ನೂ ನೀಡಿದ್ದಾರೆ. ಈ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಒಡಿಶಾದ ಕ್ಯಾಪಿಟಲ್ ಆಸ್ಪತ್ರೆಗೆ ಶುಕ್ರವಾರ ತಡರಾತ್ರಿ 17 ವರ್ಷದ ಬಾಲಕಿಯೊಬ್ಬಳು ರಕ್ತಸಿಕ್ತವಾಗಿ ಅರೆಪ್ರಜ್ಞಾಹೀನ ಸ್ಥಿತಿಯಲ್ಲಿ ಒಬ್ಬಂಟಿಯಾಗಿ ನಡೆದುಕೊಂಡು ಬಂದಿದ್ದಾಳೆ. ಆಕೆಯ ಸ್ಥಿತಿಯನ್ನು ಕಂಡ ವೈದ್ಯರು ತಕ್ಷಣ ಆಕೆಗೆ ವೈದ್ಯಕೀಯ ಸಹಾಯವನ್ನು ನೀಡಿದ್ದಾರೆ. ಮಧ್ಯರಾತ್ರಿಯ ಸುಮಾರಿಗೆ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಆಕೆಯ ಗಾಯಗಳನ್ನು ಗಮನಿಸಿ ಅತ್ಯಾಚಾರ ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಶಿಷ್ಟಾಚಾರದ ಪ್ರಕಾರ ವೈದ್ಯಕೀಯ ತಂಡವು ಆಸ್ಪತ್ರೆಯ ಹೊರಠಾಣೆ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದೆ.
