ಉದಯವಾಹಿನಿ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹೇಜಲ್‌ವುಡ್, ಇದೀಗ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಕಾಡಿದ್ದಾರೆ. ಈ ಪಂದ್ಯದಲ್ಲಿ 7 ಓವರ್‌ಗಳನ್ನು ಬೌಲ್ ಮಾಡಿದ ಹೇಜಲ್‌ವುಡ್ ಕೇವಲ 20 ರನ್ ಬಿಟ್ಟುಕೊಟ್ಟು ಪ್ರಮುಖ 2 ವಿಕೆಟ್‌ಗಳನ್ನು ಕಬಳಿಸಿದರು. ಹೇಜಲ್ವುಡ್ಗೆ ಬಲಿಯಾದವರಲ್ಲಿ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಸೇರಿದ್ದರು.
ವಾಸ್ತವವಾಗಿ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣದಿಂದಾಗಿ ಪಂದ್ಯವನ್ನು ಹಲವು ಬಾರಿ ನಿಲ್ಲಿಸಬೇಕಾಯಿತು. ಅದರಂತೆ ಪಂದ್ಯ 2ನೇ ಬಾರಿ ನಿಂತು ಆರಂಭವಾದ ಬಳಿಕ ಶ್ರೇಯಸ್ ಅಯ್ಯರ್ ತಮ್ಮ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದರು. ಆದರೆ ಆ ಓವರ್ ನಂತರ ಬೌಲಿಂಗ್ಗೆ ಬಂದ ಆಸ್ಟ್ರೇಲಿಯಾದ ವೇಗಿ ಹೇಜಲ್‌ವುಡ್, ಅಯ್ಯರ್ ಅವರನ್ನು ಶಾರ್ಟ್ ಬಾಲ್‌ನಲ್ಲಿ ಔಟ್ ಮಾಡಿದರು. ಈ ಮೂಲಕ ಹೇಜಲ್‌ವುಡ್ ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್ ಎರಡರಲ್ಲೂ 13 ಇನ್ನಿಂಗ್ಸ್‌ಗಳಲ್ಲಿ ಏಳನೇ ಬಾರಿಗೆ ಶ್ರೇಯಸ್ ಅಯ್ಯರ್ ಅವರನ್ನು ಔಟ್ ಮಾಡಿದರು. ಹೇಜಲ್‌ವುಡ್ ವಿಕೆಟ್ ಪಡೆದಿದ್ದಲ್ಲದೆ, ಭಾರತೀಯ ಬ್ಯಾಟ್ಸ್‌ಮನ್‌ಗಳು ಪ್ರತಿ ರನ್‌ಗೂ ಪರದಾಡುವಂತೆ ಮಾಡಿದರು. ಹೇಜಲ್‌ವುಡ್ ಈ ಪಂದ್ಯದಲ್ಲಿ ಏಳು ಓವರ್‌ಗಳನ್ನು ಬೌಲಿಂಗ್ ಮಾಡಿದರು. ಅಂದರೆ ಅವರು ಬೌಲ್ ಮಾಡಿದ ಒಟ್ಟಾರೆ 42 ಎಸೆತಗಳಲ್ಲಿ, 35 ಎಸೆತಗಳಲ್ಲಿ ಯಾವುದೇ ರನ್ ಬಿಟ್ಟುಕೊಡಲಿಲ್ಲ. ಅವರ ವಿರುದ್ಧ ಗಳಿಸಿದ 20 ರನ್‌ಗಳು ಮೂರು ಬೌಂಡರಿಗಳು, ನಾಲ್ಕು ಸಿಂಗಲ್ಸ್ ಮತ್ತು ನಾಲ್ಕು ವೈಡ್‌ಗಳಿಂದ ಬಂದವು.
