ಉದಯವಾಹಿನಿ, ಶಿವಮೊಗ್ಗ: ಪ್ರವಾಸಿಗರ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ (Accident) ಘಟನೆ ಕಾರ್ಗಲ್ ಸಮೀಪದ ಆಡುಕಟ್ಟೆಯ ಜೋಗಿನ ಮಠದ ಬಳಿ ನಡೆದಿದೆ. ಅಪಘಾತದಲ್ಲಿ ಸುಮಾರು 18 ಮಂದಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ರತ್ನಮ್ಮ (50), ಗಮ್ಯಶ್ರೀ (11), ಸುಶೀಲಾ (45), ನಾರಾಯಣಪ್ಪ (72), ಸುಮಿತ್ ಕುಮಾರ್ (38), ಸುಬ್ಬಲಕ್ಷ್ಮಿ(29), ರೋಹಿತ್ ( 20), ನವೀನ್ (12), ಸಾವಿತ್ರಿ (36), ವಿದ್ಯಾ ರಾಣಿ (34), ಜ್ಯೋತಿ (32), ಪುಷ್ಪಾವತಿ (48), ಲಕ್ಷ್ಮಿ (50), ಗಂಗಮ್ಮ (65), ಮದನ್ (14), ಗೌತಮ್ (30), ಶಕುಂತಲಾ (34) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸ್ಥಳೀಯರ ನೆರವಿನೊಂದಿಗೆ ಕಾರ್ಗಲ್ ಠಾಣೆ ಪೊಲೀಸರು ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗೌರಿಬಿದನೂರು ತಾಲೂಕಿನ 45 ಜನ ಪ್ರವಾಸಿಗರ ತಂಡ, ಖಾಸಗಿ ಬಸ್‌ನಲ್ಲಿ ಪ್ರವಾಸಕ್ಕೆ ಆಗಮಿಸಿತ್ತು. ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ (Sigandur Chowdeshwari Temple) ಭೇಟಿ ನೀಡಿ, ವಡನಬೈಲ್ ಬಳೆ ಪದ್ಮಾವತಿ ಅಮ್ಮನವರ ದೇವಾಲಯಕ್ಕೆ ತೆರಳುತ್ತಿದ್ದರು. ಈ ವೇಳೆ ಬಸ್ ಬ್ರೇಕ್ ಫೇಲ್ ಆಗಿ ಪಲ್ಟಿಯಾಗಿದೆ ಎನ್ನಲಾಗುತ್ತಿದೆ. ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ.
