ಉದಯವಾಹಿನಿ, ಚಿಕ್ಕಮಗಳೂರು: ಕಡೂರು ತಾಲೂಕಿನ ಆಲಘಟ್ಟ ಗ್ರಾಮದಲ್ಲಿ ಹೆಂಡತಿಯನ್ನು ಕೊಂದು ಕೊಳವೆ ಬಾವಿಗೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸರು ಮಹಿಳೆಯ ಮೃತದೇಹವನ್ನು ಹೊರತೆಗೆದಿದ್ದಾರೆ.
ಆರೋಪಿ ವಿಜಯ್ ಕಳೆದ ಒಂದೂವರೆ ತಿಂಗಳ ಹಿಂದೆ ತನ್ನ ಪತ್ನಿ ಭಾರತಿಯನ್ನು (28) ಕೊಂದು ಯಾರಿಗೂ ತಿಳಿಯಂತೆ ತಮ್ಮದೇ ತೋಟದಲ್ಲಿ ನೀರು ಬಂದಿದ್ದ ಕೊಳವೆ ಬಾವಿಯಲ್ಲಿ ಹೂತಿದ್ದ. ಬಳಿಕ ಬಾವಿಯೊಳಗೆ ಗೋಣಿಚೀಲ, ಮರಳು ಹಾಕಿ ಮುಚ್ಚಿದ್ದ. ಯಾರಿಗೂ ಅನುಮಾನ ಬಾರದಿರಲಿ ಎಂದು ಆತನೇ ಹೋಗಿ ನನ್ನ ಪತ್ನಿ ಮಾನಸಿಕ ಅಸ್ವಸ್ಥೆ, ಎಲ್ಲೋ ಹೋಗಿದ್ದಾಳೆ ಹುಡುಕಿಕೊಡಿ ಎಂದು ಕಡೂರು ಠಾಣೆಯಲ್ಲಿ ದೂರು ಕೂಡ ನೀಡಿದ್ದ. ಒಂದೂವರೆ ತಿಂಗಳಿಂದ ಪೊಲೀಸರು ಪ್ರಕರಣದ ಹಿಂದೆ ಬಿದ್ದಿದ್ದರು. ಪೊಲೀಸರ ಸೂಕ್ಷ್ಮ ತನಿಖೆಯಿಂದ ಹಂತಕ ಆಕೆಯ ಗಂಡನೇ ಎಂದು ತಿಳಿದು ಬಂದಿತ್ತು. ಬಳಿಕ ಪೊಲೀಸರು ಮೃತಳ ಅತ್ತೆ-ಮಾವ ಗಂಡನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ವಿಚಾರಣೆ ವೇಳೆ ಆರೋಪಿ, ಹೆಂಡತಿ ಹೆಸರು ಬರೆದು ಆಕೆ ದೆವ್ವ-ಪೀಡೆ-ಪಿಶಾಚಿ ಆಗಬಾರದು, ಈ ಕೇಸ್ ಗೊತ್ತಾಗಬಾರದು, ಕೇಸ್ ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲವಾಗಬೇಕು. ಕೋರ್ಟಿನಲ್ಲಿ ಕೇಸ್ ನಿಲ್ಲಬಾರದು ಎಂದು ದೇವರಿಗೆ ಮೂರು ಪ್ರಾಣಿ ಬಲಿ ನೀಡಿ, ಕಬ್ಬಿಣದ ತಗಡಿನಲ್ಲಿ ಬರೆದು ಹೆಂಡತಿ ಫೋಟೋ ಇರಿಸಿ ದೇವಾಲಯದ ಮರಕ್ಕೆ ಮೊಳೆ ಹೊಡೆದಿದ್ದ ಎಂದು ತಿಳಿದು ಬಂದಿದೆ.
