ಉದಯವಾಹಿನಿ, ನವದೆಹಲಿ: ಅಕ್ರಮ ಸಂಬಂಧ ವಿಚಾರವಾಗಿ ಗರ್ಭಿಣಿ ಹಾಗೂ ಆಕೆಯ ಪ್ರಿಯಕರ ಹತ್ಯೆಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಗರ್ಭಿಣಿಯನ್ನು ಆಕೆಯ ಪ್ರಿಯಕರನೇ ಇರಿದು ಕೊಂದಿದ್ದಾನೆ. ಪತ್ನಿಯ ಪ್ರಿಯಕರನನ್ನು ಆಕೆಯ ಪತಿ ಹತ್ಯೆ ಮಾಡಿದ್ದಾರೆ. ಬೆಚ್ಚಿಬೀಳಿಸುವ ಹತ್ಯೆ ಘಟನೆ ರಾಮ್‌ನಗರ ಪ್ರದೇಶದಲ್ಲಿ ನಡೆದಿದೆ. ಗೃಹಿಣಿ ಶಾಲಿನಿ (22) ಮತ್ತು ಆಕೆಯ ಪ್ರಿಯಕರ ಆಶು ಅಲಿಯಾಸ್ ಶೈಲೇಂದ್ರ (34) ಮೃತಪಟ್ಟವರು. ಮಹಿಳೆ ಪತಿ ಆಕಾಶ್ (24) ಈಗ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಶಾಲಿನಿ ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿದ್ದರು. ಆಕೆಯ ಪತಿ ಇ-ರಿಕ್ಷಾ ಚಾಲಕನಾಗಿದ್ದ. ಶಾಲಿನಿ ಜೊತೆ ಶೈಲೇಂದ್ರ ಅಕ್ರಮ ಸಂಬಂಧ ಹೊಂದಿದ್ದ. ಶಾಲಿನಿ ಗರ್ಭಿಣಿಯಾಗಿದ್ದಳು. ಪತಿ ಜೊತೆ ಜಗಳ ಮಾಡಿಕೊಂಡಿದ್ದಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಕಾಶ್ ಮತ್ತು ಶಾಲಿನಿ ಕುತುಬ್ ರಸ್ತೆಯಲ್ಲಿ ತಮ್ಮ ತಾಯಿಯನ್ನು ಭೇಟಿಯಾಗಲು ಹೋಗಿದ್ದಾಗ ಪ್ರಿಯಕರ ದಾಳಿ ನಡೆಸಿದ್ದಾನೆ. ಆಕಸ್ಮಿಕವಾಗಿ ಕಾಣಿಸಿಕೊಂಡ ಆಶು, ಆಕಾಶ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ. ನಂತರ ಇ-ರಿಕ್ಷಾದಲ್ಲಿ ಶಾಲಿನಿ ಇರುವುದನ್ನು ಗಮನಿಸಿ ಆಕೆಗೆ ಹಲವು ಬಾರಿ ಇರಿದಿದ್ದಾನೆ.
ಪತ್ನಿಯನ್ನು ರಕ್ಷಿಸಲು ಮುಂದಾದ ಆಕಾಶ್‌ಗೂ ಚಾಕುವಿನಿಂದ ಇರಿಯುತ್ತಾನೆ. ಈ ವೇಳೆ ಆಶುವಿನಿಂದ ಚಾಕು ಕಸಿದುಕೊಂಡು ಆತನಿಗೆ ಇರಿದು ಆಕಾಶ್ ಹತ್ಯೆ ಮಾಡುತ್ತಾನೆ. ಶಾಲಿನಿಯ ಸಹೋದರ ರೋಹಿತ್ ತಕ್ಷಣ ಆಕೆ ಮತ್ತು ಆಕೆಯ ಪತಿಯನ್ನು ಆಸ್ಪತ್ರೆಗೆ ಸೇರಿಸುತ್ತಾನೆ. ಪೊಲೀಸರು ಆಶುನನ್ನು ಅದೇ ಆಸ್ಪತ್ರೆಗೆ ದಾಖಲಿಸುತ್ತಾರೆ. ಆಸ್ಪತ್ರೆಯಲ್ಲಿ ಶಾಲಿನಿ ಮತ್ತು ಪ್ರಿಯಕರ ಆಶು ಸಾವನ್ನಪ್ಪುತ್ತಾರೆ. ಪತ್ನಿಯನ್ನು ಉಳಿಸುವಾಗ ಆಕಾಶ್‌ಗೆ ಹಲವು ಇರಿತದ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರ) ನಿಧಿನ್ ವಲ್ಸನ್ ತಿಳಿಸಿದ್ದಾರೆ. ಶಾಲಿನಿಯ ತಾಯಿ ಶೀಲಾ ಅವರ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಕೊಲೆ ಮತ್ತು ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
