ಉದಯವಾಹಿನಿ , ಹಾಸ್ಯನಟಿ ಭಾರ್ತಿ ಸಿಂಗ್ ಮತ್ತು ಹರ್ಷ್ ಲಿಂಬಾಚಿಯಾ ದಂಪತಿ ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ. ಮುಂಜಾನೆ ಆಸ್ಪತ್ರೆಗೆ ದಾಖಲಾಗಿದ್ದ ಭಾರ್ತಿ ಸಿಂಗ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಭಾರ್ತಿ ಸಿಂಗ್ ಬೆಳಗ್ಗೆ ಲಾಫ್ಟರ್ ಚೆಫ್ಸ್ ಎಂಬ ಟಿವಿ ಶೋ ಕಾರ್ಯಕ್ರಮದ ಚಿತ್ರೀಕರಣಕ್ಕೆ ಹೋಗಬೇಕಿತ್ತು. ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ತಮ್ಮ 2ನೇ ಮಗುವಿಗೆ ಜನ್ಮ ನೀಡಿದ್ದಾರೆ.
ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ರಜೆಯ ಸಮಯದಲ್ಲಿದ್ದಾಗ ಎರಡನೇ ಮಗುವಿಗೆ ತಂದೆ-ತಾಯಿ ಆಗುತ್ತಿರುವ ಶುಭ ಸುದ್ದಿಯನ್ನು ದಂಪತಿ ಹಂಚಿಕೊಂಡಿದ್ದರು. ಕೆಲವು ವಾರಗಳ ಹಿಂದಷ್ಟೇ ಹಾಸ್ಯನಟಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದರು. ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಬಿಳಿ ಹೂವಿನ ವಿನ್ಯಾಸಗಳಿಂದ ಅಲಂಕರಿಸಲ್ಪಟ್ಟ ನೀಲಿ ರೇಷ್ಮೆ ಗೌನ್‌ನಲ್ಲಿ ಭಾರ್ತಿ ಸುಂದರವಾಗಿ ಕಾಣುತ್ತಿದ್ದರು. ‘2ನೇ ಮಗು ಲಿಂಬಾಚಿಯಾ ಶೀಘ್ರವೇ ಮನೆಗೆ ಆಗಮಿಸಲಿದೆ’ ಎಂದು ಕ್ಯಾಪ್ಷನ್ ಕೊಟ್ಟು ಫೋಟೊವನ್ನು ಸಾಮಾಜಿಕ ಮಾಧ್ಯದಲ್ಲಿ ಶೇರ್ ಮಾಡಿದ್ದರು. ಹರ್ಷ್ ಮತ್ತು ಭಾರ್ತಿ 2022 ರಲ್ಲಿ ತಮ್ಮ ಮೊದಲ ಮಗುವಾದ ಮಗ ಲಕ್ಷ್ಯನನ್ನು ಸ್ವಾಗತಿಸಿದ್ದರು.
ಹಾಸ್ಯನಟಿ ಭಾರ್ತಿ ಸಿಂಗ್ ಮತ್ತು ಅವರ ಪತಿ, ಬರಹಗಾರ-ನಿರೂಪಕ ಹರ್ಷ್ ಲಿಂಬಾಚಿಯಾ ಟಿವಿ ಶೋನ ಅತ್ಯಂತ ಜನಪ್ರಿಯ ದಂಪತಿಯಲ್ಲಿ ಒಬ್ಬರು. ಭಾರ್ತಿ ತಮ್ಮ ಅದ್ಭುತ ಹಾಸ್ಯಗಳ ಮೂಲಕ ಮನೆಮಾತಾಗಿದ್ದಾರೆ. ಬರಹಗಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಹರ್ಷ್, ನಿರೂಪಕರಾಗಿಯೂ ಯಶಸ್ವಿಯಾಗಿ ಗುರುತಿಸಿಕೊಂಡಿದ್ದಾರೆ. ಟಿವಿ ಶೋ ಹೊರತಾಗಿ ಈ ಜೋಡಿ ಒಟ್ಟಿಗೆ ಪಾಡ್‌ಕ್ಯಾಸ್ಟ್ ಅನ್ನು ಸಹ ನಿರೂಪಿಸುತ್ತಿದೆ.
