ಉದಯವಾಹಿನಿ, ಮುಂಬೈ: ಒಂದು ಅಂತಸ್ತಿನ ವಸತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಬಾಲಕನೋರ್ವ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಮಹಾರಾಷ್ಟ್ರದ ಮುಂಬೈನ ಕಫೆ ಪರೇಡ್ ಪ್ರದೇಶದ ಚಾಲ್‌ನಲ್ಲಿ ಸೋಮವಾರ ನಡೆದಿದೆ. ಕ್ಯಾಪ್ಟನ್ ಪ್ರಕಾಶ್ ಪೇಥೆ ಮಾರ್ಗದಲ್ಲಿರುವ ಶಿವಶಕ್ತಿ ನಗರದ ಚಾಲ್‌ನಲ್ಲಿ ಸೋಮವಾರ ಬೆಳಗ್ಗೆ ಸುಮಾರು 4.15ಕ್ಕೆ ಈ ಘಟನೆ ನಡೆದಿದೆ. ಗಾಯಾಳುಗಳನ್ನು ತಕ್ಷಣ ಸೇಂಟ್ ಜಾರ್ಜ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ 15 ವರ್ಷದ ಯಶ್ ವಿಠ್ಠಲ್ ಖೋಟ್ ಎಂಬ ಬಾಲಕ ಮೃತಪಟ್ಟಿದ್ದಾನೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಿವಶಕ್ತಿ ನಗರದ ಚಾಲ್‌ನಲ್ಲಿ ಸೋಮವಾರ ಮುಂಜಾನೆ ನಡೆದ ಬೆಂಕಿ ದುರಂತದಲ್ಲಿ ದೇವೇಂದ್ರ ಚೌಧರಿ (30), ವಿರಾಜ್ ಖೋಟ್ (13) ಮತ್ತು ಸಂಗ್ರಾಮ್ ಕುರ್ನೆ (25) ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಇವರನ್ನು ಐಸಿಯುಗೆ ದಾಖಲಿಸಲಾಗಿದೆ.
ಚಾಲ್‌ನ ಮೊದಲ ಮಹಡಿಯಲ್ಲಿ ಸುಮಾರು 10×10 ಅಡಿ ಅಳತೆಯ ಪ್ರದೇಶದಲ್ಲಿ ವಿದ್ಯುತ್ ವೈರಿಂಗ್, ಅಳವಡಿಕೆಗಳು, ಮೂರು ವಿದ್ಯುತ್ ವಾಹನ ಬ್ಯಾಟರಿಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಇಡಲಾಗಿತ್ತು. ಇಲ್ಲಿ ಬೆಂಕಿ ಕಾಣಿಸಿಕೊಂಡು ಅವಘಡ ಸಂಭವಿಸಿದೆ. ಅಗ್ನಿಶಾಮಕ ದಳದ ವಾಹನವನ್ನು ಸ್ಥಳಕ್ಕೆ ಕಳುಹಿಸಲಾಯಿತು. ಸರಿಸುಮಾರು ಅರ್ಧ ಗಂಟೆಯ ಅವಧಿಯಲ್ಲಿ ಅಂದರೆ ಬೆಳಗ್ಗೆ 4.35 ರ ಹೊತ್ತಿಗೆ ಬೆಂಕಿಯನ್ನು ನಂದಿಸಲಾಗಿದೆ. ಈ ಬೆಂಕಿಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ.
ಇನ್ನೊಂದು ಪ್ರಕರಣದಲ್ಲಿ ಸೋಮವಾರ ಮುಂಜಾನೆ ಗುಜರಾತ್‌ನ ದೇವಭೂಮಿ ದ್ವಾರಕಾದಲ್ಲಿರುವ ಮಹಾನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದರು. ಕೆಲ ಕಾಲ ಪ್ರಯತ್ನದ ಬಳಿಕ ಬೆಂಕಿಯನ್ನು ನಂದಿಸಲಾಗಿದೆ. ಹೆಚ್ಚಿನ ಅಪಾಯವೇನೂ ಸಂಭವಿಸಿಲ್ಲ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!