ಉದಯವಾಹಿನಿ, ವಾಷಿಂಗ್ಟನ್‌: ಭಾರತವನ್ನು ಓಲೈಸುವಲ್ಲಿ ನಿರತರಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರತಿಕ್ರಿಯೆ ನೀಡುತ್ತಾ ಮತ್ತೆ ಮತ್ತೆ ಟೀಕೆಗೆ ಗುರಿಯಾಗುತ್ತಿದ್ದಾರೆ. ಭಾರತ-ರಷ್ಯಾ ತೈಲ ಸಂಬಂಧದ ಬಗ್ಗೆ ಏಕಪಕ್ಷೀಯ ಹೇಳಿಕೆಗಳನ್ನು ನೀಡುತ್ತಿರುವ ಅಮೆರಿಕ ಅಧ್ಯಕ್ಷರು, ಭಾರತದ ಸ್ಪಷ್ಟ ನಿರಾಕರಣೆಯನ್ನ ಪರಿಗಣಿಸುತ್ತಲೇ ಇಲ್ಲ. ಇದೆಲ್ಲದರ ಮಧ್ಯೆ ಪ್ರಧಾನಿ ಮೋದಿ – ಟ್ರಂಪ್‌ ಭೇಟಿಗೆ ವೇದಿಕೆ ಸಿದ್ಧವಾಗುತ್ತಿದೆ.
ಈ ವಾರದ ಕೊನೆಯಲ್ಲಿ ನಡೆಯಲಿರುವ ಆಸಿಯಾನ್‌ ಮತ್ತು ಪೂರ್ವ ಏಷ್ಯಾ ಶೃಂಗಸಭೆಗಳ ಸಂದರ್ಭದಲ್ಲಿ ನರೇಂದ್ರ ಮೋದಿ ಮತ್ತು ಡೊನಾಲ್ಡ್‌ ಟ್ರಂಪ್‌ ಭೇಟಿಯಾಗುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ಇದೇ ವೇಳೆ ಭಾರತ ಮತ್ತು ಯುಎಸ್‌ ನಡುವಿನ ವ್ಯಾಪಾರ ಯುದ್ಧಕ್ಕೆ ತೆರೆ ಬೀಳುವ ಸಾಧ್ಯತೆಗಳು ಇವೆ ಎಂದು ಹೇಳಲಾಗ್ತಿದೆ.
ರಷ್ಯಾದ ತೈಲ ಖರೀದಿ ಮಾಡುವ ಮೂಲಕ ಉಕ್ರೇನ್‌ ವಿರುದ್ಧ ಯುದ್ಧಕ್ಕೆ ಭಾರತ ಫಂಡಿಂಗ್‌ ಮಾಡುತ್ತಿದೆ ಅನ್ನೋದು ಅಮೆರಿಕದ ಬಲವಾದ ನಂಬಿಕೆ. ಹೀಗಾಗಿ ಟ್ರಂಪ್‌ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವಂತೆ ಪದೇ ಪದೇ ಒತ್ತಾಯಿಸುತ್ತಲೇ ಇದ್ದಾರೆ. ಅಲ್ಲದೇ ಮೋದಿ ಅವರು ತೈಲ ಖರೀದಿ ನಿಲ್ಲಿಸುವುದಾಗಿ ಭರವಸೆ ನೀಡಿದ್ದಾರೆಂದು ಹೇಳುತ್ತಲೇ ಇದ್ದಾರೆ. ಇಲ್ಲದಿದ್ದರೆ, ಭಾರತದ ಆಮದುಗಳ ಮೇಲೆ ಮತ್ತಷ್ಟು ಸುಂಕ ವಿಧಿಸುವ ಎಚ್ಚೆರಿಕೆ ನೀಡಿದ್ದಾರೆ. ಭಾರತದ ಮೇಲೆ ಸುಂಕ ವಿಧಿಸಿರೋದ್ರಿಂದ ಜವಳಿ, ಔಷಧಗಳು, ರತ್ನ ಮತ್ತು ಆಭರಣಗಳ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ. ಇದು ಅಮೆರಿಕಕ್ಕೂ ಹೊಡೆತ ಕೊಟ್ಟಿದೆ. ಹೀಗಾಗಿ ಉಭಯ ನಾಯಕರು ನವೆಂಬರ್‌ ಅಂತ್ಯದ ವೇಳೆ ವ್ಯಾಪಾರ ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಆಸಿಯಾನ್‌ ಶೃಂಗ ಸಭೆ ವೇಳೆ ಮೋದಿ – ಟ್ರಂಪ್‌ ಮಾತುಕತೆ ನಡೆಸಲಿದ್ದು, ಇದಕ್ಕೆ ಪರಿಹಾರ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!