ಉದಯವಾಹಿನಿ, ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತ ಭವನದಲ್ಲಿ ಭಾರತೀಯ ಮೂಲದ ಅಧಿಕಾರಿಗಳ ಜೊತೆ ಡೊನಾಲ್ಡ್ ಟ್ರಂಪ್ ದೀಪಾವಳಿ ಆಚರಿಸಿದ್ದಾರೆ. ತಮ್ಮ ಓವಲ್ ಕಚೇರಿಯಲ್ಲಿ ಆಯೋಜನೆಗೊಂಡಿದ್ದ ವಿಶೇಷ ದೀಪಾವಳಿ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದ ಅವರು, ಭಾರತದ ಜನರಿಗೆ ಹೃತ್ಪೂರ್ವಕ ಶುಭಾಶಯಗಳು. ಕತ್ತಲೆಯ ಮೇಲೆ ಬೆಳಕು, ಕೆಟ್ಟದ್ದರ ಮೇಲೆ ಒಳ್ಳೆಯದು ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯ ಎಂದು ದೀಪಾವಳಿಯನ್ನು ಬಣ್ಣಿಸಿದರು.
ನಾನು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿ ದೀಪಾವಳಿಯ ಶುಭ ಕೋರಿದ್ದೇನೆ. ಈ ವೇಳೆ ಭಾರತವು ತನ್ನ ರಷ್ಯಾದ ತೈಲ ಆಮದುಗಳನ್ನು ಕಡಿಮೆ ಮಾಡುವುದಾಗಿ ಮೋದಿ ಭರವಸೆ ನೀಡಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧವು ಕೊನೆಗೊಳ್ಳಬೇಕೆಂದು ಅವರು ಬಯಸಿದ್ದಾರೆ ಎಂದು ಹೇಳಿದರು.
ಮೋದಿ ಅವರನ್ನು ಉತ್ತಮ ಸ್ನೇಹಿತ ಎಂದು ಹೊಗಳಿದ ಟ್ರಂಪ್ ಭಾರತ ಮತ್ತು ಅಮೆರಿಕದ ನಡುವಿನ ವ್ಯಾಪಾರ ಒಪ್ಪಂದ ಮಾತುಕತೆ ಪ್ರಗತಿಯಲ್ಲಿದೆ.
ಈ ಕಾರ್ಯಕ್ರಮದಲ್ಲಿ ಅಮೆರಿಕದಲ್ಲಿನ ಭಾರತೀಯ ರಾಯಭಾರಿ ವಿನಯ್ ಕ್ವಾತ್ರಾ, ಎಫ್‌ಬಿಐ ಮುಖ್ಯಸ್ಥ ಕಾಶ್ ಪಟೇಲ್ ಮತ್ತು ಗುಪ್ತಚರ ಮುಖ್ಯಸ್ಥ ತುಳಸಿ ಗಬ್ಬಾರ್ಡ್, ಭಾರತಕ್ಕೆ ಹೊಸ ಯುಎಸ್ ರಾಯಭಾರಿ ಸೆರ್ಗಿಯೊ ಗೋರ್ ಮತ್ತು ಭಾರತೀಯ ಅಮೇರಿಕನ್ ವ್ಯಾಪಾರಿ ನಿಯೋಗದ ಪ್ರತಿನಿಧಿಗಳು ಭಾಗಿಯಾಗಿದ್ದರು.
ರಷ್ಯಾದಿಂದ ಭಾರತ ಕಚ್ಚಾ ತೈಲ ಆಮದನ್ನು ಕಡಿಮೆ ಮಾಡಲಿದೆ ಎಂದು ಟ್ರಂಪ್ ಈ ಹಿಂದೆ ಹಲವು ಬಾರಿ ಹೇಳಿಕೆ ನೀಡಿದ್ದರು. ಆದರೆ ಭಾರತದ ವಿದೇಶಾಂಗ ಇಲಾಖೆ ಟ್ರಂಪ್ ಹೇಳಿಕೆಯನ್ನು ತಿರಸ್ಕರಿಸಿತ್ತು.
