ಉದಯವಾಹಿನಿ, ಟೆಹ್ರಾನ್: ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ನೇತೃತ್ವದ ಕಟ್ಟಾ ಇಸ್ಲಾಮಿಕ್ ಆಡಳಿತವು ಇದೀಗ ಹೊಸ ವಿವಾದಕ್ಕೆ ಸಿಲುಕಿಕೊಂಡಿದೆ. ಖಮೇನಿಯ ಆಪ್ತ ಸಹಾಯಕ ಶಮ್ಖಾನಿ ಪುತ್ರಿಯ ವಿವಾಹದಲ್ಲಿ ವಧು ಹಾಗೂ ಆಕೆಯ ತಾಯಿ ಹಿಜಾಬ್ ಧರಿಸದೇ ಕಾಣಿಸಿಕೊಂಡಿದ್ದು ವಿವಾದಕ್ಕೀಡಾಗಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
2024ರಲ್ಲಿ ಟೆಹ್ರಾನ್‌ನ ಐಷಾರಾಮಿ ಹೋಟೆಲ್‌ನಲ್ಲಿ ಈ ಮದುವೆ ನಡೆದಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಸದ್ದು ಮಾಡುತ್ತಿದೆ. ಹಿಜಾಬ್ ಧರಿಸುವುದು ಮಹಿಳೆಯ ಕರ್ತವ್ಯ ಎಂದು ಪ್ರತಿಪಾದಿಸುವ ಖಮೇನಿ ಆಪ್ತನ ಮಗಳ ಮದುವೆಯಲ್ಲೇ ನಿಯಮ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮೂಲಕ ಇರಾನ್‌ನಲ್ಲಿ ಹಿಜಾಬ್ ವಿರುದ್ಧದ ಹೋರಾಟವನ್ನು ಬಲವಂತವಾಗಿ ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಮ್ಖಾನಿ ಮುಖವಾಡ ಕಳಚಿ ಬಿದ್ದಿದೆ.
ಹಿಜಾಬ್ ಕಡ್ಡಾಯಗೊಳಿಸುವ ಕಾನೂನು ತೆರವುಗೊಳಿಸುವಂತೆ ಇರಾನ್‌ನಾದ್ಯಂತ ಮಹಿಳೆಯರು 2022ರಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಈ ವೇಲೆ ಶಮ್ಖಾನಿ ರಾಷ್ಟ್ರೀಯ ಭದ್ರತಾ ಮಂಡಳಿಯ ನಾಯಕತ್ವ ವಹಿಸಿದ್ದರು. ಅಲ್ಲದೇ ಪ್ರತಿಭಟನೆಯಲ್ಲಿ ತೊಡಗಿದ್ದ ಮಹಿಳೆಯರನ್ನು ಹಿಂಸಿಸಲಾಗಿತ್ತು. ಆದರೆ ಶಮ್ಖಾನಿ ಪುತ್ರಿಯ ವಿವಾಹದಲ್ಲಿ ವಧು ಹಾಗೂ ಆಕೆಯ ತಾಯಿ ಹಿಜಾಬ್ ಧರಿಸದೇ ಇರುವುದು ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
