ಉದಯವಾಹಿನಿ,ರಷ್ಯಾ : ರಷ್ಯಾದಿಂದ ಶೀಘ್ರದಲ್ಲೇ S-400 ವಾಯು ರಕ್ಷಣಾ ವ್ಯವಸ್ಥೆಗಾ0 ಹೆಚ್ಚಿನ ಸಂಖ್ಯೆಯ ಕ್ಷಿಪಣಿಗಳನ್ನ ಖರೀದಿಸಲು ಭಾರತ ಸಿದ್ಧತೆ ನಡೆಸುತ್ತಿದೆ. ಅದಕ್ಕಾಗಿ 10,000 ಕೋಟಿ ರೂ. ಒಪ್ಪಂದ ಅಂತಿಮಗೊಳಿಸಲಾಗಿದೆ. ವಾಯುಪಡೆಯ ಗೇಮ್ ಚೇಂಜರ್ ಎಂದೇ ಗುರುತಿಸಿಕೊಂಡಿರುವ S-400 ವಾಯುರಕ್ಷಣಾ ವ್ಯವಸ್ಥೆ ಈಗಾಗಲೇ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡಿದೆ. ಆದ್ದರಿಂದ ವಾಯುರಕ್ಷಣಾ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸಲು ಎಸ್-400 ಖರೀದಿಗೆ ಭಾರತ ಮುಂದಾಗಿದೆ.
ಈ ಒಪ್ಪಂದದ ಕುರಿತು ಭಾರತ ಮತ್ತು ರಷ್ಯಾದ ನಡುವೆ ಮಾತುಕತೆ ಅಂತಿಮಗೊಂಡಿದೆ. ಅ.23ರಂದು ರಕ್ಷಣಾ ಸಚಿವಾಲಯದ ರಕ್ಷಣಾ ಸ್ವಾಧೀನ ಮಂಡಳಿಯು ಸಭೆ ಸೇರಲಿದ್ದು, ಅಧಿಕೃತ ಹೇಳಿಕೆಯನ್ನು ಪ್ರಕಟಿಸಲಿದೆ ಎಂದು ವರದಿಯಾಗಿದೆ.
2018ರಲ್ಲಿ ಭಾರತ ಎಸ್-400 ವಾಯು ರಕ್ಷಣಾ ವ್ಯವಸ್ಥೆಗಳಿಗಾಗಿ ರಷ್ಯಾದೊಂದಿಗೆ 5.5 ಶತಕೋಟಿ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿತ್ತು. ಚೀನಾದ (China) ಮಿಲಿಟರಿ ಶಕ್ತಿಯನ್ನು ಎದುರಿಸುವ ಉದ್ದೇಶದಿಂದ ಅಂದು ಭಾರತ, ರಷ್ಯಾ ಜೊತೆ ಈ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದ್ರೆ ಈವರೆಗಿನ ಪೂರೈಕೆಯಲ್ಲಿ ವಿಳಂಬವಾಗಿತ್ತು. ಇದೀಗ ಈ ಒಪ್ಪಂದದ ಅಡಿಯಲ್ಲಿ ಕೊನೆಯ 2 ಘಟಕಗಳು 2026 ಮತ್ತು 2027ರ ವೇಳೆ ಭಾರತಕ್ಕೆ ಲಭ್ಯವಾಗಲಿದೆ.
