ಉದಯವಾಹಿನಿ , ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ‘ಮಹಾ ಜಂಗಲ್ ರಾಜ್’ ಪರಿಸ್ಥಿತಿ ಇದೆ ಎಂದು ತೃಣಮೂಲ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಆಡಳಿತ ವ್ಯವಸ್ಥೆಯ ಓಲೈಕೆಯು ರಾಜ್ಯದಲ್ಲಿ ಅಭಿವೃದ್ಧಿಯನ್ನು ತಡೆದಿದೆ ಎಂದು ಆರೋಪಿಸಿದ್ದಾರೆ.ಕೋಲ್ಕತ್ತಾದ ನಾಡಿಯಾ ಜಿಲ್ಲೆಯ ತಾಹೆರ್‌ಪುರದಲ್ಲಿ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ‘ಡಬಲ್ ಎಂಜಿನ್ ಸರ್ಕಾರ’ ರಚಿಸಲು ಬಿಜೆಪಿಗೆ ಅವಕಾಶ ನೀಡುವಂತೆ ಜನರನ್ನು ಮೋದಿ ಮನವಿ ಮಾಡಿದ್ದಾರೆ. ಟಿಎಂಸಿ ನನ್ನ ಮತ್ತು ಬಿಜೆಪಿಯನ್ನು ಎಷ್ಟು ಬೇಕಾದರೂ ವಿರೋಧಿಸಲಿ. ಆದರೆ, ಆಡಳಿತ ಪಕ್ಷವು ಜನರನ್ನು ಬಲವಂತಪಡಿಸಲು, ಅವರಿಗೆ ತೊಂದರೆ ಕೊಡಲು ಮತ್ತು ಬಂಗಾಳದ ಪ್ರಗತಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ಮೋದಿ ತಿಳಿಸಿದ್ದಾರೆ. ಬಂಗಾಳದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಓಲೈಕೆ ರಾಜಕೀಯ ಮಾಡುತ್ತಿರುವ ಟಿಎಂಸಿಯ ‘ಮಹಾ ಜಂಗಲ್ ರಾಜ್’ ಅನ್ನು ನಾವು ಕೊನೆಗೊಳಿಸುತ್ತೇವೆ. ಬಂಗಾಳದ ತಳಮಟ್ಟದ ಜನರ ಭಾವನೆ ಟಿಎಂಸಿಯ ದುರಾಡಳಿತದಿಂದ ಸ್ವಾತಂತ್ರ್ಯ ಪಡೆಯುವುದು. ರಾಜ್ಯದ ಬೀದಿಗಳು ಮತ್ತು ಗಲ್ಲಿಗಳಲ್ಲಿ ಬದುಕಲು ಬಿಜೆಪಿ ಬೇಕು ಎಂಬ ಘೋಷಣೆಗಳು ಪ್ರತಿಧ್ವನಿಸುತ್ತಿವೆ ಎಂದು ಹೇಳಿದ್ದಾರೆ.
ಮೋದಿ ಇಂದು ಬೆಳಗ್ಗೆ 10:40 ರ ಸುಮಾರಿಗೆ ಕೋಲ್ಕತ್ತಾಗೆ ಆಗಮಿಸಿ ಹೆಲಿಕಾಪ್ಟರ್‌ನಲ್ಲಿ ನಾಡಿಯಾಗೆ ತೆರಳಿದರು. ಅಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ನಂತರ ಪರಿವರ್ತನ ಸಂಕಲ್ಪ ಸಭಾ ಎಂಬ ಬಿಜೆಪಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.
