ಉದಯವಾಹಿನಿ, ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ INDIA ಮೈತ್ರಿಕೂಟದ ಸಿಎಂ ಅಭ್ಯರ್ಥಿಯಾಗಿ ವಿರೋಧ ಪಕ್ಷದ ನಾಯಕ, ಮಾಜಿ ಡಿಸಿಎಂ ತೇಜಸ್ವಿ ಯಾದವ್ ಅವರನ್ನು ಘೋಷಿಸಿಲಾಗಿದೆ. ಸಿಎಂ ಅಭ್ಯರ್ಥಿ ಆಯ್ಕೆ ಬಗ್ಗೆ ಸುಧೀರ್ಘ ಚರ್ಚೆ ಬಳಿಕ ಅಂತಿಮವಾಗಿ ತೇಜಸ್ವಿ ಯಾದವ್ ಅವರ ಹೆಸರು ಘೋಷಿಸಲಾಯಿತು. ಇದೇ ಸಂದರ್ಭದಲ್ಲಿ ವಿಕಾಸ್‌ಶೀಲ್ ಇನ್ಸಾನ್ ಪಕ್ಷದ ಮುಖ್ಯಸ್ಥ ಮುಖೇಶ್ ಸಹಾನಿ ಅವರನ್ನು ಮೈತ್ರಿಕೂಟದ ಉಪಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪ್ರಕಟಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕ ಅಶೋಕ್ ಗೆಹ್ಲೋಟ್, ಮುಂಬರುವ ಬಿಹಾರ ಚುನಾವಣೆಯಲ್ಲಿ (Bihar Election) ತೇಜಸ್ವಿ ಯಾದವ್ ಅವರನ್ನು ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮೈತ್ರಿಕೂಟ ನಿರ್ಧರಿಸಿದೆ. ಅವರಿಗೆ ದೀರ್ಘ ಭವಿಷ್ಯವಿದೆ. ನಿಶಾದ್ ಸಮುದಾಯದಲ್ಲಿ ಗಮನಾರ್ಹ ಪ್ರಭಾವ ಹೊಂದಿರುವ ಮುಖೇಶ್ ಸಹಾನಿ ಜೊತೆಗೆ, ಹಿಂದುಳಿದ ವರ್ಗದ ಮತ್ತೊಬ್ಬ ನಾಯಕನನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಲಾಗುವುದು ಎಂದು ಹೇಳಿದರು. ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಮಾತನಾಡಿ, ನಾವು ಬಿಹಾರಕ್ಕಾಗಿ ಕೆಲಸ ಮಾಡಲು ಮತ್ತು ಎನ್‌ಡಿಎಯ (NDA) ಡಬಲ್-ಎಂಜಿನ್ ಸರ್ಕಾರವನ್ನು ಕೊನೆಗೊಳಿಸಲು ಬಯಸುತ್ತೇವೆ, ಇಲ್ಲಿರುವ ಡಬಲ್ ಇಂಜಿನ್ ಪೈಕಿ ಒಂದು ಎಂಜಿನ್ ಭ್ರಷ್ಟಾಚಾರದಿಂದ ನಡೆಸಲ್ಪಟ್ಟರೇ ಇನ್ನೊಂದು ಎಂಜಿನ್ ಅಪರಾಧದಿಂದ ನಡೆಸಲ್ಪಡುತ್ತದೆ ಎಂದು ವಾಗ್ದಾಳಿ ನಡೆಸಿದರು.

 

Leave a Reply

Your email address will not be published. Required fields are marked *

error: Content is protected !!