ಉದಯವಾಹಿನಿ, ಬಾಂಗ್ಲಾದೇಶ : ಕೆಲ ದಿನಗಳ ಹಿಂದೆ ಬಾಂಗ್ಲಾದೇಶದಲ್ಲಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಹೋರಾಟಗಾರರು ಬೀದಿಗೆ ಇಳಿದಿದ್ದರು. ಹಿಂದೆ ಶೇಖ್ ಹಸೀನಾ ಸರ್ಕಾರವನ್ನು ಬೀಳಿಸಲು ಮಾಡಿದ ಹೋರಾಟದಂತಲ್ಲ. ಬದಲಾಗಿ ತೀಸ್ತಾ ನದಿ ಯೋಜನೆಗಾಗಿ ಮಾಡಿದ ಹೋರಾಟ. ಯೋಜನೆಯನ್ನು ಶೀಘ್ರ ಜಾರಿಗೊಳಿಸುವಂತೆ ಒತ್ತಾಯಿಸಲು ಈ ಹೋರಾಟ ನಡೆಸಲಾಗುತ್ತಿದೆ. ಮೇಲ್ನೋಟಕ್ಕೆ ಇದು ಜನರಿಗೆ ಉಪಯೋಗ ಆಗುವ ನದಿ ಯೋಜನೆ. ಆದರೆ, ಪ್ರಾದೇಶಿಕ ರಾಜಕೀಯ ಚಹರೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನಂತೂ ಹೊಂದಿದೆ.
ತೀಸ್ತಾ ನದಿ ನೀರಿನ ಯೋಜನೆ ಏನು?: ತೀಸ್ತಾ ನದಿ ಭಾರತದಲ್ಲಿ ಹುಟ್ಟಿ ಬಾಂಗ್ಲಾದೇಶದ ಮೂಲಕ ಹರಿದು ಸಮುದ್ರ ಸೇರುತ್ತದೆ. ಸಿಕ್ಕಿಂನ ಚೋಲಮು ಸರೋವರದಲ್ಲಿ ಈ ನದಿ ನೀರಿನ ಹುಟ್ಟು ಇರುವುದು. ಸಿಕ್ಕಿಂನಿಂದ ಪಶ್ಚಿಮ ಬಂಗಾಳಕ್ಕೆ ಬಂದು ಬ್ರಹ್ಮಪುತ್ರ ನದಿಯನ್ನು ಸೇರುತ್ತದೆ. ಹಾಗೆಯೇ, ಬಾಂಗ್ಲಾದೇಶದಲ್ಲಿ ರಂಗಪುರ್ ಸೇರಿದಂತೆ ಮೂರು ಜಿಲ್ಲೆಗಳಲ್ಲಿ ತೀಸ್ತಾ ನದಿ ನೀರು ಹರಿದು ಅಲ್ಲಿಯ ಜಮುನಾ ನದಿಯೊಂದಿಗೆ ಮಿಲನಗೊಳ್ಳುತ್ತದೆ.
ಒಟ್ಟು 414 ಕಿಮೀ ದೂರ ಹರಿಯುವ ಈ ನದಿಯು ಬಾಂಗ್ಲಾದೇಶದಲ್ಲಿ ಹರಿಯುವುದು 140 ಕಿಮೀ ಮಾತ್ರ. ಈ ನದಿ ನೀರು ಹಂಚಿಕೆ ವಿಚಾರವು ಭಾರತ ಮತ್ತು ಬಾಂಗ್ಲಾದೇಶದ ಮಧ್ಯೆ ಇನ್ನೂ ಬಗೆಹರಿದಿಲ್ಲ. ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಮಧ್ಯೆ ಎಷ್ಟು ನೀರು ಹಂಚಿಕೆ ಆಗಬೇಕು ಎಂಬುದು ಅಂತಿಮಗೊಂಡಿಲ್ಲ. ಹೆಚ್ಚು ನೀರು ಬೇಕೆಂದು ಬಾಂಗ್ಲಾದೇಶದ ಬೇಡಿಕೆಯನ್ನು ಪಶ್ಚಿಮ ಬಂಗಾಳ ಒಪ್ಪುತ್ತಿಲ್ಲ. ಬಾಂಗ್ಲಾದೇಶದಲ್ಲಿರುವ ತೀಸ್ತಾ ವ್ಯಾಪ್ತಿ ಪ್ರದೇಶದ ಮೂರು ಜಿಲ್ಲೆಗಳಲ್ಲಿ ನೀರಿನ ಬವಣೆ ಹೆಚ್ಚು. ಹೀಗಾಗಿ, ನದಿ ನೀರಿನ ಮೇಲಿನ ಅವಲಂಬನೆ ಬಹಳ ಹೆಚ್ಚಿದೆ. ಭಾರತದಿಂದ ಹಂಚಿಕೆಯಾಗುವ ನೀರಿನ ಪ್ರಮಾಣವು ತೃಪ್ತಿಯಾಗದ ಹಿನ್ನೆಲೆಯಲ್ಲಿ ಬಾಂಗ್ಲಾದೇಶವು ಚೀನಾ ನೆರವಿನಿಂದ ತೀಸ್ತಾ ನದಿ ನೀರಿನ ಮಾಸ್ಟರ್ ಪ್ಲಾನ್ ಯೋಜನೆ ಹಮ್ಮಿಕೊಂಡಿದೆ.ವಿವಿಧ ಕಡೆ ಜಲಾಶಯಗಳು, ನೀರಿನ ಕಾಲುವೆಗಳನ್ನು ನಿರ್ಮಿಸುವುದು ಈ ಯೋಜನೆಯ ಭಾಗವಾಗಿದೆ. ಚೀನಾದ ಕಂಪನಿಗಳಿಗೆ ಇದರ ಗುತ್ತಿಗೆ ನೀಡಲಾಗಿದೆ.
