ಉದಯವಾಹಿನಿ, ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರು, ನಿರ್ದೇಶಕರೂ ಆದಿಯಾಗಿ ಚಿತ್ರತಂಡ ಮತ್ತು ಸಿನಿಮಾ ಪತ್ರಕರ್ತರೊಂದಿಗೆ ಸಂಪರ್ಕಕೊಂಡಿಯಾಗಿ ಕಳೆದ 5 ದಶಕಗಳಿಂದ ಕೆಲಸ ಮಾಡುತ್ತಿರುವ ʼಶ್ರೀ ರಾಘವೇಂದ್ರ ಚಿತ್ರವಾಣಿʼ ಸಂಸ್ಥೆ ಹಲವು ಚಿತ್ರಗಳನ್ನು ನಿರ್ಮಾಣದಲ್ಲಿಯೂ ಗುರುತಿಸಿಕೊಂಡು ಚಿತ್ರರಂಗಕ್ಕೆ ತನ್ನದೇ ಆದ ವಿಶಿಷ್ಠ ಕೊಡುಗೆ ಮತ್ತು ಸೇವೆ ನೀಡಿದೆ. ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಮುನ್ನೆಡೆಸುತ್ತಿರುವ ಹಿರಿಯ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಈಗ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ತಮ್ಮ ಪುತ್ರ ಪವನ್ ವೆಂಕಟೇಶ್ ಆಕ್ಷನ್ ಕಟ್ ಹೇಳಿರುವ ʼಫಸ್ಟ್ ಸ್ಯಾಲರಿʼ ಕಿರುಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಶೀರ್ಷಿಕೆ ಕೆಳಗೆ ಕನಸುಗಳ ಹಾದಿ ಎನ್ನುವ ಅಡಿಬರಹವಿದೆ. ʼಫಸ್ಟ್ ಸ್ಯಾಲರಿʼ ಕಿರುಚಿತ್ರದ ಪೋಸ್ಟರ್ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗಿದೆ.
ಕರೋನ ಸಮಯದಲ್ಲಿ ʼಕರಾಳ ರೋಗ ನಾಶʼ ಎಂಬ ಕಿರುಚಿತ್ರ ಸೇರಿದಂತೆ ಅನೇಕ ಕಿರುಚಿತ್ರಗಳನ್ನು ನಿರ್ದೇಶನ ಮಾಡಿ ಅನುಭವ ಹೊಂದಿರುವ ಪವನ್ ವೆಂಕಟೇಶ್, ಈಗ ʼಫಸ್ಟ್ ಸ್ಯಾಲರಿʼ ಎಂಬ ಕಿರುಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.
