ಉದಯವಾಹಿನಿ, ಇಸ್ಲಾಮಾಬಾದ್‌: ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ಇತ್ತೀಚಿನ ಸಂಘರ್ಷದ ಬಳಿಕ ಪಾಕಿಸ್ತಾನದ ದೇಶೀಯ ಮಾರುಕಟ್ಟೆ ತೀವ್ರ ಸಂಕಷ್ಟದಲ್ಲಿದೆ. ಟೊಮೆಟೊ ಬೆಲೆಗಳು ಗಗನಕ್ಕೇರಿವೆ. ಅಫ್ಘಾನಿಸ್ತಾನ ತನ್ನ ಗಡಿ ಮುಚ್ಚಿದ್ದು, ಪಾಕಿಸ್ತಾನದಲ್ಲಿ ಟೊಮೆಟೊ ಬೆಲೆ ಶೇ.400ರಷ್ಟು ಏರಿಕೆ ಕಂಡಿದೆ. ಲಾಹೋರ್ ಮತ್ತು ಕರಾಚಿ ಸೇರಿದಂತೆ ಹಲವಾರು ಪ್ರಮುಖ ನಗರಗಳಲ್ಲಿ, ಟೊಮೆಟೊ ಬೆಲೆ ಪ್ರತಿ ಕಿಲೋಗ್ರಾಂಗೆ 700 ರೂ. ತಲುಪಿದೆ. ಸ್ವಲ್ಪ ದಿನಗಳ ಹಿಂದೆ ಇದರ ಬೆಲೆ 100 ರೂ.ಗಳಿತ್ತು. ಇರಾನಿನ ಟೊಮೆಟೊಗಳು ಪ್ರಸ್ತುತ ಪಾಕಿಸ್ತಾನ ಮಾರುಕಟ್ಟೆಗೆ ಬರುತ್ತಿವೆ, ಆದರೆ ಗಡಿ ಉದ್ವಿಗ್ನತೆ ಮತ್ತು ಮಿಲಿಟರಿ ಸಂಘರ್ಷದ ನಂತರ ಅಫ್ಘಾನಿಸ್ತಾನಕ್ಕೆ ರಫ್ತು ಸ್ಥಗಿತಗೊಳಿಸುವುದರಿಂದ ಪಾಕಿಸ್ತಾನದಾದ್ಯಂತ ಟೊಮೆಟೊ ಸೇರಿದಂತೆ ಹಲವು ಉತ್ಪನ್ನಗಳ ಬೆಲೆ ಗಗನಕ್ಕೇರಿದೆ.

ಪಾಕಿಸ್ತಾನದ ಹಲವು ಭಾಗಗಳಲ್ಲಿ ಪ್ರವಾಹ ಉಂಟಾಗಿದ್ದು, ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಪಾಕಿಸ್ತಾನದಲ್ಲಿ ಟೊಮೆಟೊ ಬೆಲೆಯಲ್ಲಿನ ಏರಿಕೆ ಪಂಜಾಬ್ ಪ್ರಾಂತ್ಯಗಳಾದ ಝೇಲಂ ಮತ್ತು ಗುಜ್ರಾನ್‌ವಾಲಾದಲ್ಲಿ ಹೆಚ್ಚು ಸ್ಪಷ್ಟವಾಗಿ ಕಂಡುಬಂದಿದೆ. ಝೇಲಂನಲ್ಲಿ ಟೊಮೆಟೊ ಬೆಲೆ ಕಿಲೋಗ್ರಾಂಗೆ 700 ರೂ. ತಲುಪಿದ್ದರೆ, ಗುಜ್ರಾನ್‌ವಾಲಾದಲ್ಲಿ, ಅವು ಪ್ರತಿ ಕಿಲೋಗ್ರಾಂಗೆ 575 ರೂ.ಗೆ ಮಾರಾಟವಾಗುತ್ತಿವೆ. ಪಾಕಿಸ್ತಾನದ ಇತರ ಭಾಗಗಳಲ್ಲಿ, ಮುಲ್ತಾನ್‌ನಲ್ಲಿ ಪ್ರತಿ ಕಿಲೋಗ್ರಾಂಗೆ 450 ರೂ. ಮತ್ತು ಫೈಸಲಾಬಾದ್‌ನಲ್ಲಿ 500 ರೂ. ಬೆಲೆಯಿದೆ. ತಾಜಾ ಹಣ್ಣು, ತರಕಾರಿಗಳು, ಖನಿಜಗಳು, ಔಷಧ, ಗೋಧಿ, ಅಕ್ಕಿ, ಸಕ್ಕರೆ, ಮಾಂಸ ಮತ್ತು ಡೈರಿ ಉತ್ಪನ್ನಗಳು ಎರಡೂ ದೇಶಗಳ ನಡುವಿನ ವಾರ್ಷಿಕ $2.3 ಬಿಲಿಯನ್ ವ್ಯಾಪಾರದ ಪ್ರಮಾಣದಲ್ಲಿ ಹೆಚ್ಚಿನ ಪಾಲನ್ನು ಹೊಂದಿವೆ.
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಕತಾರ್ ವಿದೇಶಾಂಗ ಸಚಿವಾಲಯ ಭಾನುವಾರ ತಿಳಿಸಿದೆ. ಉಭಯ ರಾಷ್ಟ್ರಗಳ ನಡುವೆ ಒಂದು ವಾರಕ್ಕೂ ಹೆಚ್ಚು ಕಾಲ ನಡೆದ ಸಂಘರ್ಷದಲ್ಲಿ ಅಫ್ಘಾನಿಸ್ತಾನದ ಕ್ರೆಕಿಟಿಗರು ಸೇರಿದಂತೆ 12ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ. ಶಾಶ್ವತ ಶಾಂತಿ ಮತ್ತು ಸ್ಥಿರತೆಯನ್ನು ಕ್ರೋಢೀಕರಿಸಲು ಕಾರ್ಯವಿಧಾನಗಳನ್ನು ಸ್ಥಾಪಿಸಲು ಹಾಗೂ ಕದನ ವಿರಾಮದ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಮುಂದಿನ ದಿನಗಳಲ್ಲಿ ಮಾತುಕತೆಗಳನ್ನು ನಡೆಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ಕತಾರ್ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!