ಉದಯವಾಹಿನಿ, ಮಾಸ್ಕೋ: ಉಕ್ರೇನ್‌ನೊಂದಿಗಿನ ಯುದ್ಧವು ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿರುವಾಗ, ನೆರೆಯ ಉಕ್ರೇನ್‌ಗೆ ಟೊಮಾಹಾಕ್ ಕ್ಷಿಪಣಿಗಳನ್ನು ಪೂರೈಸುವುದರ ವಿರುದ್ಧ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ. ರಷ್ಯಾದ ಭೂಪ್ರದೇಶವನ್ನು ಹೊಡೆಯಲು ಬಳಸಲಾಗುವ ಇಂತಹ ಕ್ಷಿಪಣಿಗೆ ಪ್ರತಿಕ್ರಿಯೆ ‘ಗಂಭೀರವಾಗಿರುತ್ತದೆ ಎಂದು ಪುಟಿನ್ ಹೇಳಿದ್ದಾರೆ. ಸಂವಾದ ಯಾವಾಗಲೂ ಘರ್ಷಣೆ ಅಥವಾ ಯಾವುದೇ ವಿವಾದಗಳಿಗಿಂತ ಉತ್ತಮ, ವಿಶೇಷವಾಗಿ ಯುದ್ಧಕ್ಕಿಂತ ಉತ್ತಮ. ನಾವು ಯಾವಾಗಲೂ ಮಾತುಕತೆಯ ಮುಂದುವರಿಕೆಯನ್ನು ಬೆಂಬಲಿಸುತ್ತೇವೆ. ಆದರೆ ರಷ್ಯಾದ ಸುರಕ್ಷತೆ ವಿಷಯ ಬಂದರೆ ರಾಜಿಯ ಮಾತಿಲ್ಲ ಎಂದು ಅವರು ಹೇಳಿದರು.
ತೈಲ ಕಂಪನಿಗಳ ಮೇಲೆ ಕಠಿಣ ನಿರ್ಬಂಧ ಹೇರಿರುವ ಕುರಿತು ಮಾತನಾಡಿದ ಪುಟಿನ್, ರಡು ಪ್ರಮುಖ ತೈಲ ಕಂಪನಿಗಳನ್ನು ಗುರಿಯಾಗಿಸಿಕೊಂಡು ಅಮೆರಿಕದ ಇತ್ತೀಚಿನ ನಿರ್ಬಂಧಗಳು “ಗಂಭೀರ”ವಾಗಿವೆ, ಆದರೆ ಆರ್ಥಿಕತೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವಷ್ಟು ಬಲವಾಗಿಲ್ಲ ಎಂದು ಹೇಳಿದ್ದಾರೆ. ಉಕ್ರೇನ್ ಯುದ್ಧದ ವಿಚಾರದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಅಮೆರಿಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ರಷ್ಯಾದ ಎರಡು ಅತಿದೊಡ್ಡ ತೈಲ ಕಂಪನಿಗಳ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ನಿರ್ಬಂಧಗಳನ್ನು ವಿಧಿಸಿದ್ದಾರೆ.
