ಉದಯವಾಹಿನಿ, ಲಂಡನ್: ಭಾರತೀಯ ಮೂಲದ ಇತಿಹಾಸಕಾರ ಸುನೀಲ್ ಅಮೃತ್ ಅವರ ‘ದಿ ಬರ್ನಿಂಗ್ ಅರ್ಥ್: ಆ್ಯನ್ ಎನ್ವಿರಾನ್‌ಮೆಂಟಲ್ ಹಿಸ್ಟರಿ ಆಫ್ ದಿ ಲಾಸ್ಟ್ 500 ಯಿಯರ್ಸ್’ ಕೃತಿಯು ಈ ವರ್ಷದ ‘ಬ್ರಿಟಿಷ್ ಅಕಾಡೆಮಿ’ ಪುಸ್ತಕ ಪ್ರಶಸ್ತಿಗೆ ಭಾಜನವಾಗಿದೆ.ಸೃಜನೇತರ ಕೃತಿಗಳಿಗಾಗಿ ನೀಡುವ ಈ ಅಂತರರಾಷ್ಟ್ರೀಯ ಪ್ರಶಸ್ತಿಯು ಒಟ್ಟು 25 ಸಾವಿರ ಪೌಂಡ್ (ಅಂದಾಜು ₹29 ಲಕ್ಷ) ಮೊತ್ತವನ್ನು ಒಳಗೊಂಡಿದೆ.
ಅಮೆರಿಕದ ಯೇಲ್ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿರುವ ಅಮೃತ್, ದಕ್ಷಿಣ ಭಾರತ ಮೂಲದ ದಂಪತಿಗೆ ಕೆನ್ಯಾದಲ್ಲಿ ಜನಿಸಿದರು. ಸಿಂಗಪುರದಲ್ಲಿ ಆರಂಭಿಕ ಶಿಕ್ಷಣ ಪಡೆದ ಅವರು, ಬ್ರಿಟನ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ.
ಬುಧವಾರ ಸಂಜೆ ಲಂಡನ್‌ ಬ್ರಿಟಿಷ್ ಅಕಾಡೆಮಿಯಲ್ಲಿ ನಡೆದ ಸಮಾರಂಭದಲ್ಲಿ ತೀರ್ಪುಗಾರರ ತಂಡದ ಅಧ್ಯಕ್ಷೆ, ಬ್ರಿಟನ್ ಮೂಲದ ಇತಿಹಾಸಗಾರ್ತಿ ರೆಬೆಕ್ಕಾ ಅರ್ಲ್ ಈ ಪ್ರಶಸ್ತಿ ಘೋಷಿಸಿದರು.
‘ಹವಾಮಾನ ಬದಲಾವಣೆಯಿಂದಾಗಿ ಸೃಷ್ಟಿಯಾಗಿರುವ ಬಿಕ್ಕಟ್ಟು ಅರ್ಥ ಮಾಡಿಕೊಳ್ಳಲು ಬಯಸುವವರು ಓದಲೇಬೇಕಾದ ಕೃತಿ ಇದು. ಮಾನವನ ಇತಿಹಾಸ ಮತ್ತು ಪರಿಸರದಲ್ಲಾಗುವ ಪರಿವರ್ತನೆ ನಡುವಿನ ಪರಸ್ಪರ ಸಂಬಂಧಗಳನ್ನು ಈ ಕೃತಿ ತೆರೆದಿಡುತ್ತದೆ’ ಎಂದು ಅವರು ಬಣ್ಣಿಸಿದರು.
ಅಮೆರಿಕದಿಂದ ವರ್ಚುವಲ್ ವಿಧಾನದ ಮೂಲಕ ಸಮಾರಂಭ ಉದ್ದೇಶಿಸಿ ಮಾತನಾಡಿದ ಸುನೀಲ್‌ ಅಮೃತ್‌, ‘ಈ ಕೃತಿಯು ಮಾನವ ಮತ್ತು ಪರಿಸರಕ್ಕೆ ಆಗುವ ಹಾನಿ ಹಾಗೂ ಅನುಭವಿಸುವ ಸಂಕಟಗಳನ್ನು ವಿವರಿಸುತ್ತದೆ’ ಎಂದರು.

Leave a Reply

Your email address will not be published. Required fields are marked *

error: Content is protected !!