ಉದಯವಾಹಿನಿ,ನವದೆಹಲಿ: ನವೆಂಬರ್ 28 ರಿಂದ ಡಿಸೆಂಬರ್ 28 ರವರೆಗೆ ಚೆನ್ನೈ ಮತ್ತು ಮಧುರೈನಲ್ಲಿ ನಡೆಯಲಿರುವ ಜೂನಿಯರ್ ಹಾಕಿ ವಿಶ್ವಕಪ್‌(junior hockey World Cup)ನಿಂದ ಪಾಕಿಸ್ತಾನ ತಂಡ(Pakistan hockey) ಹಿಂದೆ ಸರಿದಿದೆ. ಅಂತರರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್‌ಐಎಚ್) ಶುಕ್ರವಾರ ಈ ಬೆಳವಣಿಗೆಯನ್ನು ದೃಢಪಡಿಸಿದ್ದು, ಪಾಕಿಸ್ತಾನಕ್ಕೆ ಬದಲಿ ತಂಡವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ತಿಳಿಸಿದೆ. ಇತ್ತೀಚೆಗೆ ಏಷ್ಯಾಕಪ್ ಹಾಕಿ ಪಂದ್ಯಾವಳಿಯಿಂದಲೂ ಪಾಕ್‌ ಹಿರಿಯರ ತಂಡ ಕೊನೆಯ ಹಂತದಲ್ಲಿ ಹಿಂದೆ ಸರಿದಿತ್ತು.

24 ತಂಡಗಳ ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಭಾರತ, ಚಿಲಿ ಮತ್ತು ಸ್ವಿಟ್ಜರ್‌ಲ್ಯಾಂಡ್ ಜೊತೆಗೆ ಪಾಕಿಸ್ತಾನ ಒಂದು ಗುಂಪಿನಲ್ಲಿ ಸ್ಥಾನ ಪಡೆದಿತ್ತು. ಇದಕ್ಕೂ ಮೊದಲು, ಬಿಹಾರದ ರಾಜ್‌ಗಿರ್‌ನಲ್ಲಿ ನಡೆದ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನದ ಬದಲು ಬಾಂಗ್ಲಾದೇಶಕ್ಕೆ ಅವಕಾಶ ನೀಡಲಾಗಿತ್ತು. ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಹದಗೆಟ್ಟಿರುವ ನಡುವೆ ಭದ್ರತಾ ಕಾಳಜಿಯಿಂದಾಗಿ ಪಾಕಿಸ್ತಾನ ಪಂದ್ಯಾವಳಿಯಿಂದ ಹಿಂದೆ ಸರಿದಿದೆ ಎಂದು ವರದಿಗಳು ತಿಳಿಸಿದೆ.

ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ್ದು, ನಂತರದ ಆಪರೇಷನ್ ಸಿಂಧೂರ್ ಮೂಲಕ ಭಾರತ ಪ್ರತೀಕಾರ ತೀರಿಸಿಕೊಂಡಿತ್ತು. ಇದು ಕ್ರೀಡಾ ಸಂಬಂಧಗಳ ಮೇಲೆ ಪರಿಣಾಮ ಬೀರಿದೆ. ಪಾಕಿಸ್ತಾನ ಹಾಕಿ ಫೆಡರೇಶನ್ ಅಧ್ಯಕ್ಷ ರಾಣಾ ಮುಜಾಹಿದ್ ಅವರು ಏಷ್ಯಾ ಕಪ್ ಸಮಯದಲ್ಲಿ ನಡೆದ ಘಟನೆಗಳನ್ನು, ಭಾರತೀಯ ಆಟಗಾರರು ತಮ್ಮ ಪಾಕಿಸ್ತಾನಿ ಸಹವರ್ತಿಗಳೊಂದಿಗೆ ಕೈಕುಲುಕಲು ನಿರಾಕರಿಸಿದ ಕ್ಷಣಗಳನ್ನು ದ್ವಿಪಕ್ಷೀಯ ಕ್ರೀಡಾ ರಾಜತಾಂತ್ರಿಕತೆಯಲ್ಲಿ ನಡೆಯುತ್ತಿರುವ ಸವಾಲುಗಳ ಪುರಾವೆಯಾಗಿ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!