ಉದಯವಾಹಿನಿ, ಕಾರವಾರ: ದೇಶದ ಕರಾವಳಿ ಭಾಗದಲ್ಲಿ ಅಬ್ಬರದ ಮಳೆ ಸುರಿಯುತ್ತಿದೆ. ಗಾಳಿ, ಮಳೆಯ ಆರ್ಭಟಕ್ಕೆ ಕರ್ನಾಟಕ ಕರಾವಳಿ ಹಾಗೂ ಗೋವಾ ಕರಾವಳಿ ಭಾಗದಲ್ಲಿ ಹಲವು ಅನಾಹುತ ತಂದೊಡ್ಡಿದೆ. ರಾಜ್ಯದಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗಿದೆ. ಜಿಲ್ಲೆಯ ಅಂಕೋಲ ತಾಲೂಕಿನ ಹಾರವಾಡದಲ್ಲಿ ಕಳೆದ 24 ಗಂಟೆಯಲ್ಲಿ 80 ಮಿ.ಮೀ, ಬೇಲಿಕೇರಿ 76 ಮಿ.ಮೀ., ಕುಮಟಾ 72.8 ಮಿ.ಮೀ ಮಳೆಯಾಗಿದೆ. ರಾಜ್ಯದಲ್ಲಿ ರಾಯಚೂರು, ದಕ್ಷಿಣ ಕನ್ನಡ, ವಿಜಯಪುರ, ಗದಗದಲ್ಲಿ ಹೆಚ್ಚಿನ ಮಳೆ ವರದಿಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲ, ಕುಮಟಾ, ಕಾರವಾರ ಭಾಗದಲ್ಲಿ ಹೆಚ್ಚು ಮಳೆಯಾಗಿದ್ದು, ಕಾರವಾರದಲ್ಲಿ ಇಂದು ಬೆಳಗ್ಗೆ ಸುರಿದ ಮಳೆಗೆ ನಗರದ ರೈಲ್ವೆ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ನೀರು ನಿಂತು ಸವಾರರಿಗೆ ಸಮಸ್ಯೆ ತಂದೊಡ್ಡಿತು. ಇನ್ನು ಕಾರವಾರದ ನೆರೆಯ ಗೋವಾ ರಾಜ್ಯದಲ್ಲೂ ಅಬ್ಬರದ ಗಾಳಿ-ಮಳೆ ಸುರಿದಿದ್ದು, ಗೋವಾದ ತಲೆಯಗಾವ್‌ನ ಡಾ.ಶಾಮಪ್ರಸಾದ್ ಮುಖರ್ಜಿ ಸ್ಟೇಡಿಯಮ್‌ನ ಮುಖ್ಯ ದ್ವಾರದ ಕಮಾನು ಕುಸಿದು ಬಿದ್ದು ಸಂಪೂರ್ಣ ಹಾನಿಯಾಗಿದೆ. ಇದಲ್ಲದೇ ಪಣಜಿ ನಗರದ ಹೈಕೋರ್ಟ್ ಸಮೀಪ ಇರುವ ಗುಡ್ಡ ಕುಸಿದು ಮನೆಗಳಿಗೆ ಹಾನಿ ಸಂಭವಿಸಿದೆ. ಇದಲ್ಲದೇ ಗಾಳಿಯ ಪ್ರಮಾಣ ಹೆಚ್ಚಾಗಿ ಮಳೆ ಆರ್ಭಟವೂ ಹೆಚ್ಚಾಗಿದ್ದು, ಕೆಲವು ಸಮಯ ಕಾರವಾರ-ಗೋವಾ ಹೆದ್ದಾರಿಯಲ್ಲಿ ನೀರು ನಿಂತು ಪ್ರಯಾಣಿಕರು ಪರದಾಡುವಂತಾಯಿತು. ಇನ್ನು ಕರ್ನಾಟಕ, ಗೋವಾ ಕರಾವಳಿ ಭಾಗದಲ್ಲಿ ಇನ್ನೂ ಎರಡು ದಿನ ಅಬ್ಬರದ ಮಳೆ ಸುರಿಯುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

Leave a Reply

Your email address will not be published. Required fields are marked *

error: Content is protected !!