ಉದಯವಾಹಿನಿ , ನವದೆಹಲಿ, : ಮಲೇಷ್ಯಾದ ಕೌಲಾಲಂಪುರ್​ನಲ್ಲಿ ನಡೆಯುತ್ತಿರುವ 47ನೇ ಆಸಿಯನ್ ಶೃಂಗಸಭೆಯನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದರು. ಈ ವೇಳೆ, ಸಮಿಟ್ ಆಯೋಜಿಸಿದ್ದಕ್ಕೆ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರನ್ನು ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ, ಭಾರತ ಹಾಗೂ ಆಸಿಯಾನ್ ಸಂಘಟನೆಯ ಸಹಭಾಗಿತ್ವದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ. ಭಾರತ ಮತ್ತು ಆಸಿಯಾನ್ ಜನಸಂಖ್ಯೆ ಒಟ್ಟು ಸೇರಿಸಿದರೆ ವಿಶ್ವದ ಕಾಲುಭಾಗದಷ್ಟಾಗುತ್ತದೆ. ನಾವು ಭೌಗೋಳಿಕವಾಗಿ ಮಾತ್ರ ಹತ್ತಿರ ಇಲ್ಲ, ಐತಿಹಾಸಿಕ ಹಾಗೂ ಮೌಲ್ಯಗಳ ಸಂಬಂಧ ಇದೆ. ಅಭಿವೃದ್ಧಿಶೀಲ ಜಗತ್ತಿನಲ್ಲಿ ನಾವೆಲ್ಲರೂ ಸಹವರ್ತಿಗಳಾಗಿದ್ದೇವೆ’ ಎಂದು 47ನೇ ಆಸಿಯನ್ ಸಮಿಟ್​ ಉದ್ದೇಶಿಸಿ ಪ್ರಧಾನಿ ಮೋದಿ ಹೇಳಿದ್ದಾರೆ. 21ನೇ ಶತಮಾನ ನಮಗೆ ಸೇರಿದ್ದು ಎಂದ ಮೋದಿ
‘ಈ 21ನೇ ಶತಮಾನವು ನಮ್ಮ ಶತಮಾನವಾಗಿದೆ. ಇದು ಭಾರತ ಹಾಗೂ ಆಸಿಯನ್​ನ ಶತಮಾನವಾಗಿದೆ. ಆಸಿಯನ್ ಸಮುದಾಯದ ಗುರಿ 2045 ಮತ್ತು ವಿಕಸಿತ ಭಾರತ್ 2047 ಯೋಜನೆಗಳು ಇಡೀ ಮಾನವಕುಲದ ಒಳಿತಿಗೆ ಪೂರಕವಾಗಲಿವೆ’ ಎಂದು ಪ್ರಧಾನಿಗಳು ಹೇಳಿದ್ದಾರೆ.
‘ಪ್ರತಿಯೊಂದು ಬಿಕ್ಕಟ್ಟಿನಲ್ಲೂ ಆಸಿಯನ್ ಹಾಗೂ ಅದರ ಮೈತ್ರಿದೇಶಗಳೊಂದಿಗೆ ಭಾರತ ದೃಢವಾಗಿ ನಿಂತಿದೆ. ಸಾಗರ ಆರ್ಥಿಕತೆ, ಸಾಗರ ಭದ್ರತೆ ಇತ್ಯಾದಿಯಲ್ಲಿ ಪರಸ್ಪರ ಸಹಕಾರ ಹೆಚ್ಚುತ್ತಿದೆ. ಶಿಕ್ಷಣ, ಪ್ರವಾಸೋದ್ಯಮ, ವಿಜ್ಞಾನ ತಂತ್ರಜ್ಞಾನ, ಆರೋಗ್ಯ, ಹಸಿರು ಇಂಧನ, ಸೈಬರ್ ಸೆಕ್ಯೂರಿಟಿ ವಿಚಾರದಲ್ಲಿ ಸಹಕಾರ ಬಲಪಡಿಸುವ ಕೆಲಸ ಆಗುತ್ತಿದೆ’ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!