ಉದಯವಾಹಿನಿ, ಬೆಂಗಳೂರು: ಧರ್ಮಸ್ಥಳದ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ಅಂತಿಮ ವರದಿಯನ್ನು ಸಲ್ಲಿಸುವಂತೆ ಎಸ್‌ಐಟಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಬೆಂಗಳೂರಿನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಟೋಬರ್ ತಿಂಗಳಲ್ಲಿ ವರದಿ ಕೊಡುವುದಾಗಿ ಎಸ್‌ಐಟಿಯವರು ಹೇಳಿದ್ದರು. 31ರೊಳಗೆ ಕೊಡಬಹುದು ಅಥವಾ ಒಂದೆರಡು ದಿನ ವಿಳಂಬವಾಗಬಹುದು. ಅಂತಿಮ ವರದಿಯನ್ನು ಕೊಡುವಂತೆ ಹೇಳಿದ್ದೇವೆ. ಪತ್ತೆಯಾಗಿರುವ ಮೂಳೆಗಳ ಎಫ್‌ಎಸ್‌ಎಲ್ ವರದಿ, ಕೆಮಿಕಲ್ ರಿಪೋರ್ಟ್ಸ್ ವಿಶ್ಲೇಷಣೆ ಮಾಡಿ ವರದಿ ಕೊಡುತ್ತೇವೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ನವೆಂಬರ್ 1ರಂದು ಮುಖ್ಯಮಂತ್ರಿಗಳು ಸಂತೋಷ ಕೂಟ ಏರ್ಪಡಿಸಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ. ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಊಟ ಹಾಕಿಸಿದರೆ, ರಾಜಕೀಯ ದೊಡ್ಡ ಬೆಳವಣಿಗೆ ಎನ್ನಬೇಕಿಲ್ಲ. ಇದಕ್ಕೆ ರಾಜಕೀಯವಾಗಿ ವಿಶ್ಲೇಷಣೆ ಮಾಡುವುದು ಸರಿಯಲ್ಲ. ಸಂಪುಟ ಪುನರ್ ರಚನೆ ಮಾಡುವ ಕುರಿತು ಹೈಕಮಾಂಡ್‌ನವರು ಈವರೆಗೆ ಯಾರೂ ಹೇಳಿಲ್ಲ. ಈ ಬಗ್ಗೆ ಮುನ್ಸೂಚನೆಯೂ ಇಲ್ಲ ಎಂದರು
