ಉದಯವಾಹಿನಿ, ನವದೆಹಲಿ: ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡ 2-1 ಅಂತರದಲ್ಲಿ ಏಕದಿನ ಸರಣಿಯನ್ನು ಕಳೆದುಕೊಂಡ ಹೊರತಾಗಿಯೂ, ಕೊನೆಯ ಪಂದ್ಯದಲ್ಲಿ ಅಮೋಘ ಪ್ರದರ್ಶನವನ್ನು ತೋರಿತ್ತು. ಮುಖ್ಯವಾಗಿ ಕಾಂಗರೂ ನಾಡಿನಲ್ಲಿ ಕೊನೆಯ ಸರಣಿ ಆಡಿದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯವರು ಸರಣಿಯ ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ, ಕೊನೆಯ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡಿದರು. ರೋಹಿತ್ ಶರ್ಮಾ ಅವರು ದ್ವಿತೀಯ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಲಯಕ್ಕೆ ಮರಳಿದ್ದರು. ಇನ್ನು ಕೊಹ್ಲಿ ಆರಂಭಿಕ ಎರಡೂ ಪಂದ್ಯಗಳಲ್ಲಿ ಡಕ್‌ಔಟ್‌ ಆದ ಬಳಿಕ ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಕೊನೆಯ ಪಂದ್ಯದಲ್ಲಿ ಈ ಜೋಡಿ 168 ರನ್ ಗಳ ಮಹತ್ವದ ಅಜೇಯ ಜೊತೆಯಾಟವಾಡಿ ತಂಡವನ್ನು 9 ವಿಕೆಟ್‌ಗಳ ಅಂತರದಲ್ಲಿ ಗೆಲುವಿನ ದಡ ಸೇರಿಸಿತು.
ಇದರ ನಡುವೆ ಉಭಯ ಆಟಗಾರರು ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಬಳಿಕ ಅವರ ಬಗ್ಗೆ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್, ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಡಿವಿಲಿಯರ್ಸ್, ಆಟಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರಂತಹ ಅದ್ಬುತ ಆಟಗಾರರ ಮೇಲೆ ಜನರು ಏಕೆ ನಕಾರಾತ್ಮಕವಾಗಿ ಮಾತನಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಎಬಿಡಿ, “ಜನರ ಬಗ್ಗೆ ನನಗೆ ಏನೆಂದು ಅರ್ಥವಾಗುತ್ತಿಲ್ಲ. ಅವರನ್ನು ಜನರು ಎಂದು ಕರೆಯಬಹುದೇ ಎಂದು ನನಗೆ ತಿಳಿದಿಲ್ಲ. ಆಟಗಾರರು ತಮ್ಮ ವೃತ್ತಿಜೀವನದ ಹಿಂಭಾಗಕ್ಕೆ ಹೋದ ತಕ್ಷಣ ಜಿರಳೆಗಳು ತಮ್ಮ ರಂಧ್ರಗಳಿಂದ ಹೊರಬರುತ್ತವೆ. ಏಕೆ? ತಮ್ಮ ದೇಶಕ್ಕಾಗಿ ಮತ್ತು ಈ ಸುಂದರ ಕ್ರಿಕೆಟ್ ಆಟಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಆಟಗಾರರ ಮೇಲೆ ನಕಾರಾತ್ಮಕ ಶಕ್ತಿಯನ್ನು ಸುರಿಯಲು ನೀವು ಏಕೆ ಬಯಸುತ್ತೀರಿ. ಅವರನ್ನು (ರೋ-ಕೊ) ಸಂಭ್ರಮಿಸಲು ಇದು ಸೂಕ್ತ ಸಮಯ,” ಎಂದು ಡಿವಿಲಿಯರ್ಸ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!