ಉದಯವಾಹಿನಿ, ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಕೊನೇ ಪಂದ್ಯದಲ್ಲಿ ಕ್ಯಾಚ್‌ ಹಿಡಿಯವ ವೇಳೆ ಎಡ ಪಕ್ಕೆಲುಬು ಗಾಯಕ್ಕೆ ತುತ್ತಾಗಿ ಟೀಂ ಇಂಡಿಯಾ ಉಪನಾಯಕ ಶ್ರೇಯಸ್‌ ಅಯ್ಯರ್‌ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಂತರಿಕ ರಕ್ತಸ್ರಾವದಿಂದ ಬಳಲುತ್ತಿರುವ ಅಯ್ಯರ್ ಅವರನ್ನ ಸಿಡ್ನಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

34ನೇ ಓವರ್‌ನಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್‌ ಕ್ಯಾರಿ ಬಾರಿಸಿದ ಚೆಂಡನ್ನು ಹಿಡಿಯಲು ಹಿಂದಕ್ಕೆ ಓಡಿ ಅದ್ಭುತ ಕ್ಯಾಚ್ ಪಡೆದುಕೊಂಡಿದ್ದರು. ಆ ಸಂದರ್ಭದಲ್ಲಿ ಅಯ್ಯರ್ ಪಕ್ಕೆಲುಬಿನ ಗಾಯಕ್ಕೆ ಒಳಗಾಗಿ ಮೈದಾನ ತೊರಿದಿದ್ದರು. ಅಲ್ಲದೇ ಡ್ರೆಸ್ಸಿಂಗ್‌ ರೂಮ್‌ಗೆ ಬರ್ತಿದ್ದಂತೆ ಅಯ್ಯರ್‌ ಅವರನ್ನ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವರದಿಯಲ್ಲಿ ಆಂತರಿಕ ರಕ್ತಸ್ರಾವವಾಗಿರುವುದು ಪತ್ತೆಯಾಗಿದ್ದು, ಕಳೆದ ಎರಡು ದಿನಗಳಿಂದ ಐಸಿಯುನಲ್ಲೇ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ತಿಳಿದುಬಂದಿದೆ. ರಕ್ತಸ್ರಾವದಿಂದ ಸೋಂಕು ಹರಡುವುದನ್ನ ತಪ್ಪಿಸುವ ಉದ್ದೇಶದಿಂದ ಚೇತರಿಕೆಯ ಆಧಾರದಲ್ಲಿ ಅವರನ್ನು ಎರಡರಿಂದ ಏಳು ದಿನಗಳ ಕಾಲ ವೈದ್ಯರ ಮೇಲ್ವಿಚಾರಣೆಯಲ್ಲಿಡಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಬಿಸಿಸಿಐ ಹೇಳೋದೇನು?: ಸ್ಕ್ಯಾನ್‌ ವರದಿಯಲ್ಲಿ ಪಕ್ಕೆಲುಬು ಗಾಯವಾಗಿರುವುದು ಕಂಡುಬಂದಿದೆ. ಆದ್ರೆ ವೈದ್ಯಕೀಯವಾಗಿ ಸ್ಥಿರವಾಗಿದ್ದು, ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಿದ್ದಾರೆ. ಸಿಡ್ನಿ ಮತ್ತು ಭಾರತದ ತಜ್ಞರ ಸಮನ್ವಯದೊಂದಿಗೆ ಬಿಸಿಸಿಐ ವೈದ್ಯಕೀಯ ತಂಡವು ಅಯ್ಯರ್‌ ಆರೋಗ್ಯ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅದಕ್ಕಾಗಿ ವೈದ್ಯಕೀಯ ತಂಡವನ್ನ ಸಿಡ್ನಿಯಲ್ಲೇ ಇರಿಸಲಾಗಿದೆ ಎಂದು ಬಿಸಿಸಿಐ (BCCI) ಹೇಳಿದೆ.
ಆರಂಭದಲ್ಲಿ ಅಯ್ಯ‌ರ್ ಸುಮಾರು 3 ವಾರಗಳ ಕಾಲ ಆಟದಿಂದ ಹೊರಗುಳಿಯಬೇಕಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದ್ರೆ ಪರಿಸ್ಥಿತಿ ಗಮನಿಸಿದರೆ ಅವರ ಚೇತರಿಕೆಯ ಅವಧಿ ಇನ್ನಷ್ಟು ವಿಸ್ತರಣೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!